ಅಕ್ರಮ ಸಂಬಂಧದ ಪ್ರಕರಣವೊಂದರ ಸಂಬಂಧ ಯುವಕನನ್ನು ಕರೆದೊಯ್ದು ವಿಚಾರಣೆ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿ ಯುವಕನಿಗೆ ಬಲವಂತವಾಗಿ ಮೂತ್ರ ಕುಡಿಸಿದ ಪ್ರಕರಣದಲ್ಲಿ ಆರೋಪಿ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸತ್ರ ನ್ಯಾಯಾಲಯವು ವಜಾಗೊಳಿಸಿದೆ

ಮೂಡಿಗೆರೆಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಕಿರಗುಂದದ ಪುನೀತ್ ಎಂಬ ಯುವಕನಿಗೆ ಮೂತ್ರ ಕುಡಿಸಲಾಗಿದೆ ಎಂಬ ತೀವ್ರ ತರಹದ ಆರೋಪ ಮಾಡಲಾಗಿತ್ತು. ಹಾಗೆಯೇ ಪ್ರಕರಣ ಸಹ ದಾಖಲಿಸಲಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿತ್ತು. ಅರ್ಜುನ್ ಪರ ವಕೀಲರು ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಅರ್ಜುನ್ ಪರವಾಗಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಘನ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪುನೀತ್ ಪರ ವಕೀಲರಾದ ಪರಮೇಶ್ವರ್ ಅವರು ಆರೋಪಿಗೆ ಜಾಮೀನು ನೀಡಿದಲ್ಲಿ ಆರೋಪಿಯು ಸಾಕ್ಷ್ಯನಾಶ ಹಾಗೂ ಒತ್ತಡ ತರುವ ಕೆಲಸ ಮಾಡಬಹುದು ಎಂದು ವಾದ ಮಂಡಿಸಿದ್ದರು. ಜಾಮೀನು ಅರ್ಜಿ ವಜಾಗೊಂಡ ಕಾರಣ ಆರೋಪಿ ಅರ್ಜುನ್ ಅವರ ಬಂಧನವಾಗುವ ಸಾಧ್ಯತೆಯಿದೆ.