ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಮೊಬೈಲ್‍ನಿಂದಾಗಿ ಆಟ, ಪಾಠವಿಲ್ಲದೇ ಬೌದ್ಧಿಕವಾಗಿ ದಿವಾಳಿಯಾಗುತ್ತಿದ್ದಾರೆ. ಸರಕಾರ ಆನ್‍ಲೈನ್ ಪಾಠವನ್ನು ನಿಲ್ಲಿಸಿ ಸರ್ಕಾರ ಈ ಕೂಡಲೇ ಶಾಲೆಗಳನ್ನು ಆರಂಭಿಸಬೇಕು ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳ್ಳವರು ತಮ್ಮ ಮಕ್ಕಳ ಶಿಕ್ಷಣಕ್ಕೆಂದು ದುಬಾರಿ ಮೊಬೈಲ್‍ಗಳನ್ನು ಕೊಡಿಸುತ್ತಾರೆ. ಶಿಕ್ಷಣಕ್ಕಾಗಿ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಾರೆ. ಆದರೆ ಬಡವರ ಮಕ್ಕಳಿಗೆ ದುಬಾರಿ ಮೊಬೈಲ್ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಆನ್‍ಲೈನ್ ತರಗತಿಗಳಿಂದಾಗಿ ಮಕ್ಕಳು ಮೊಬೈಲ್‍ಗಳ ದಾಸರಾಗುವ ಮೂಲಕ ಆಟ ಪಾಠವಿಲ್ಲದೇ ಮಕ್ಕಳು ಬೌದ್ಧಿಕವಾಗಿ ದಿವಾಳಿಯಾಗುತ್ತಿದ್ದಾರೆ ಎಂದರು.
ಗ್ರಾಮೀಣ ಭಾಗದ ಬಡವರ್ಗದ ಜನರು ತಮ್ಮ ಮಕ್ಕಳ ಆನ್‍ಲೈನ್ ಪಾಠಕ್ಕಾಗಿ ಹರಸಾಹಸ ಮಾಡುತ್ತಿದ್ದಾರೆ. ನೆಟ್‍ವರ್ಕ್ ಸಿಗದೇ ಮರ ಹತ್ತಿ ಕೂರುವಂತಹ ಅವ್ಯವಸ್ಥೆ ನಿರ್ಮಾಣವಾಗಿದ್ದು, ಮಕ್ಕಳಿಗೆ ಸರಿಯಾಗಿ ಪಾಠ ಕೇಳಲೂ ಸಾಧ್ಯವಾಗುತ್ತಿಲ್ಲ. ಬಡವರ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಮರಿಚೀಕೆಯಾಗಿದ್ದು, ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ, ನಮ್ಮ ಮಕ್ಕಳಿಗೆ ಶಿಕ್ಷಣ ಸಿಗುವುದಿಲ್ಲ ಎಂಬ ಮನೋಭಾವನೆಯಲ್ಲಿದ್ದಾರೆ. ಆದ್ದರಿಂದ ಆನ್‍ಲೈನ್ ಕ್ಲಾಸ್‍ಗಳನ್ನು ನಿಲ್ಲಿಸಿ ಶಾಲೆಗಳನ್ನು ಪ್ರಾರಂಭಿಸುವುದು ಒಳ್ಳೆಯದು ಎಂದು ಅವರು ಅಭಿಪ್ರಾಯ ಪಟ್ಟರು.
ಮಲೆನಾಡಿನ ಭಾಗದಲ್ಲಿ ಕೊರೋನ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು ಗ್ರಾಮೀಣ ಭಾಗದಲ್ಲೂ ಸೋಂಕು ಇಳಿಮುಖವಾಗಿದೆ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ಶಾಲೆಗಳ ಆರಂಭಕ್ಕೆ ಮುಂದಾಗಬೇಕು. ಸರ್ಕಾರ ಶಾಲೆಗಳನ್ನು ಆರಂಭಿಸಿದರೆ ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಅನಗತ್ಯ ಭಯಪಡದೆ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯಬಾರದು ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.


0 Comments