ಚಿಕ್ಕಮಗಳೂರು/ ಶೃಂಗೇರಿ : ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬೇರೆಯವರ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿಸಿ ಮೆಸೆಂಜರ್ ಮೂಲಕ ಸ್ನೇಹಿತರಿಗೆ ಹಣ ಕಳಿಸುವಂತೆ ಸಂದೇಶ ಕಳಿಸಿ ಹಣ ಕೀಳುವ ಜಾಲ ಸಕ್ರಿಯವಾಗಿದೆ.
ಶೃಂಗೇರಿಯ ಜೇಸೀಸ್ ಶಾಲೆಯ ಶಿಕ್ಷಕರಾದ ಗಣಪತಿ ಹಾಗು ಹೊಳೆಕೊಪ್ಪ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕ ಎಂ ಆರ್ ಭಾಸ್ಕರ್ ಅವರ ಫೋಟೋಗಳನ್ನು ಬಳಸಿಕೊಂಡು ಹಣ ಹಾಕುವಂತೆ ಕಿಡಿಗೇಡಿಗಳು ಸಂದೇಶ ಹರಿಯಬಿಟ್ಟಿದ್ದಾರೆ. ಇದನ್ನು ನೋಡಿದ ಅನೇಕರು ಅವರು ನೀಡಿದ ನಂಬರ್ ಗೆ ಫೋನ್ ಪೇ/ಗೂಗಲ್ ಪೇ ಮೂಲಕ ಹಣ ಹಾಕಿದ್ದಾರೆ. ನಂತರ ಗಣಪತಿ ಅವರನ್ನು ಸಂಪರ್ಕಿಸಿದಾಗ ಇದೊಂದು ಮೋಸದ ಜಾಲ ಎಂದು ತಿಳಿದುಬಂದಿದೆ.
ಕಳೆದ ಹಲವಾರು ತಿಂಗಳಿನಿಂದಲೂ ಬೇರೆಯವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಮೆಸೆಂಜರ್ ಮೂಲಕ ಎಮರ್ಜೆನ್ಸಿ ಎಂದು ಹೇಳಿ ಫೋನ್ ಪೇ ನಂಬರ್ ನೀಡಿ ವಂಚಕರು ಹಣ ಕೀಳುತ್ತಿದ್ದಾರೆ. ಈ ಹಿಂದೆ ಮಂಗಳೂರಿನ ಪೊಲೀಸ್ ಕಮಿಷನರ್ ಶಶಿ ಕುಮಾರ್ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳ ಹೆಸರು, ಫೋಟೋ ಬಳಸಿಕೊಂಡು ಹಣ ಕಿತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ಖಾತೆಯನ್ನು ನಕಲಿ ಮಾಡಿ ಹಣ ಕೀಳುತ್ತಿದ್ದರೂ ಸೈಬರ್ ಪೊಲೀಸರು ಮಾತ್ರ ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


0 Comments