ದಶಕಗಳ ಬೇಡಿಕೆಯಾದ ನೂತನ ಕಳಸ ತಾಲೂಕು ಘೋಷಣೆಗೆ ಅಧೀಕೃತ ಮುದ್ರೆ ಬಿದ್ದಿದೆ. ಈ ಕುರಿತು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಕಳಸ ಪ್ರತ್ಯೇಕ ತಾಲೂಕು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಳಸ, ಹೊರನಾಡು ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದು ಈಗ ಕಳಸ ನೂತನ ತಾಲೂಕಾಗಿ ಘೋಷಣೆಗೊಂಡಿದೆ. 

ಕಳಸ ಭಾಗದಿಂದ ಜನರು ಮೂಡಿಗೆರೆ ತಾಲೂಕು ಕೇಂದ್ರಕ್ಕೆ ಬರಲು 58 ಕಿ.ಮೀ, ಜಿಲ್ಲಾ ಕೇಂದ್ರಕ್ಕೆ 100 ಕಿ.ಮೀ ಹಾಗೂ ಬಾಳೆಹೊನ್ನೂರಿಗೆ 83 ಕಿ.ಮೀ ದೂರದ ಅಂತರವಿದೆ. ಗ್ರಾಮಾಂತರ ಭಾಗದಿಂದ ಬಂದ ಜನರು ಕೆಲಸ ಮುಗಿಸಿ ವಾಪಾಸು ತೆರಳಲು ಪೂರ್ತಿ ಒಂದು ದಿನವೇ ಬೇಕಾಗಿತ್ತು. 

ಕ್ಷೇತ್ರದ ಜನರ ಬೇಡಿಕೆಯನ್ನು ವರುಷದ ಹಿಂದೆ ಸನ್ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಪತ್ರಮುಖೇನ ತರಲಾಗಿತ್ತು, ಈ ಮನವಿಯನ್ನು ಪುರಸ್ಕರಿಸಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು ನೂತನ 'ಕಳಸ ತಾಲೂಕನ್ನು ಘೋಷಣೆ ಮಾಡಿದ್ದಾರೆ. 

ಈ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ 9 ನೇ ತಾಲೂಕು ಕೇಂದ್ರವಾಗಿ ಕಳಸ ತಾಲೂಕು ಕೇಂದ್ರ ಉದಯವಾಗಿದೆ. ಕ್ಷೇತ್ರದ ಜನರ ಬಹು ನಿರೀಕ್ಷಿತ ಬೇಡಿಕೆಯನ್ನು ಸಾಕಾರಗೊಳಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ ನೂತನ ಕಳಸ ತಾಲೂಕಿನ ಸಮಸ್ತ ಜನರ ಪರವಾಗಿ ಧನ್ಯವಾದಗಳು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.