ಚಿಕ್ಕಮಗಳೂರು : ಎಲ್ಲಾ ವರ್ಗದ ಜನರಿಗೂ ನಷ್ಟವನ್ನುಂಟುಮಾಡಿದ ಚಂಡಮಾರುತ ಹಾಗೂ ಕೋರೋಣ ಸಮಯದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ ಪರಿಹಾರೋಪಾಯ ಕಂಡುಕೊಳ್ಳಲು ಬಾರದೆ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಅವರು ಎಲ್ಲೋ ಒಂದೊಂದು ಸಲ ಮಿನುಗುತಾರೆ ಯಂತೆ ಜಿಲ್ಲೆಗೆ ಅತಿಥಿಯಂತೆ ಬಂದು ಹೋಗುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಜಿಲ್ಲಾಧ್ಯಕ್ಷ ಕಾರ್ತಿಕ್ ಚೆಟ್ಟಿಯಾರ್ ಆರೋಪಿಸಿದ್ದಾರೆ.
ಅವರು ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿದ್ದು, ಸಂಸದರು ಈ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಬಳಿಕ ಕ್ಷೇತ್ರದ ಜನರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಈ ಕ್ಷೇತ್ರದ ಅಭಿವೃದ್ದಿಗಾಗಿ ಯಾವುದೇ ರೀತಿಯಲ್ಲಿಯೂ ಪ್ರಯತ್ನಿಸಿಲ್ಲ. ಲೋಕಸಭೆಯಲ್ಲಿ ಕಾಫಿನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಈ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದಾರೆ.
ಚುನಾವಣೆಯಲ್ಲಿ ತನಗೆ ಓಟು ಕೊಡಿ ಎಂದು ಕೇಳದ ಶೋಭಾ ಕರಂದ್ಲಾಜೆಯವರು ಮೋದಿಗೆ ಓಟು ಹಾಕಿ ಎಂದು ಹಾಕಿಸಿ ಗೆದ್ದು ಮತದಾರರನ್ನು ಮೂರ್ಖರನ್ನಾಗಿಸಿ ದೆಹಲಿ ಸೇರಿ ಇತ್ತ ಜನರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳೆದ ಒಂದೂವರೆ, ಎರಡು ವರ್ಷಗಳಿಂದ ಜಿಲ್ಲೆಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋರೋಣ ಹರಡುತ್ತಿರುವ ಸಮಯದಲ್ಲಿ ಜನರು ಕೂಲಿ ಕೆಲಸ, ವ್ಯಾಪಾರ, ವ್ಯವಹಾರ, ಉದ್ಯೋಗ ಇಲ್ಲದೆ ಸಂಕಟ ಅನುಭವಿಸುತ್ತ ಇರುವಾಗ ಸಂಸದರು ಮಾತ್ರ ಜನರ ಕಷ್ಟಕ್ಕೆ ನೆರವಾಗಿಯೇ ಇಲ್ಲ ಎಂದಿದ್ದಾರೆ.
ಗ್ರಾಮೀಣ ಭಾಗದ ಜನರು ಕೈಯಲ್ಲಿ ಕಾಸಿಲ್ಲದೆ ಮನೆಯಲ್ಲಿ ಲಾಕ್ ಡೌನ್ ವೇಳೆ ಕೂತು ಪರಿತಪಿಸುತ್ತಿದ್ದರೆ ಸಂಸದರು ಕನಿಷ್ಠ ಜನರನ್ನು ಗಮನಿಸಿ ಅವರಿಗೆ ಸರಕಾರದ ಸೌಕರ್ಯ ಅರ್ಹವಾಗಿ ತಲುಪಿಸಲು ಪ್ರಯತ್ನಿಸಲಿಲ್ಲ. ತೌಕ್ತೆ ಚಂಡ ಮಾರುತದ ಪರಿಣಾಮ ನೂರಾರು ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದರೂ, ಜನರು ಮನೆ ಮಠ, ಆಸ್ತಿ ಪಾಸ್ತಿ ಕಳೆದುಕೊಂಡರು ಕೂಡ ಸಂಸದರು ಸ್ಥಳಕ್ಕೆ ಭೇಟಿ ನೀಡದೆ ಇರುವುದು ಜನಪ್ರತಿನಿಧಿ ಆಗಿರುವ ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ಚಂಡಮಾರುತ ಅಪ್ಪಳಿಸಿದ ಬಳಿಕ ಆದ ಹಾನಿ ಬಗ್ಗೆ ಕೇಂದ್ರದ ತಂಡ ಭೇಟಿ ನೀಡಿ ವರದಿ ನೀಡಲು ಬಂದಿದ್ದರೂ ಅವರನ್ನು ಭೇಟಿಯಾಗಿ, ಅವರಿಗೆ ಕ್ಷೇತ್ರದಲ್ಲಿ ನಡೆದ ನಷ್ಟದ ಪ್ರಮಾಣವನ್ನು ಮನವರಿಕೆ ಮಾಡಿಕೊಡಲು ಸಂಸದರು ಕನಿಷ್ಠ ಪ್ರಯತ್ನಿಸಿಲ್ಲ ಎಂದು ದೂರಿದ್ದಾರೆ.
ಕ್ಷೇತ್ರದ ಜನರು ಒಂದಿಲ್ಲೊಂದು ರೀತಿಯ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡ ಅದನ್ನು ಪರಿಹರಿಸಲು ಸಂಸದರು ಕಾಳಜಿ ವಹಿಸದೇ ಇರುವುದು ಜನಪ್ರತಿನಿಧಿ ಆಗಿದ್ದೂ ಪ್ರಯೋಜನ ಇಲ್ಲದವರಾಗಿದ್ದಾರೆ. ಸಾಮಾನ್ಯ ಜನರ, ರೈತರ ಹಾಗೂ ಕ್ಷೇತ್ರದ ಎಲ್ಲಾ ವರ್ಗದ ಜನರ ಸಂಕಟ ಕಾಲದಲ್ಲಿ ಧ್ವನಿ ಎತ್ತದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕ್ಷೇತ್ರದ ಜನರೆ ಸಂಪೂರ್ಣ ಮರೆತಿದ್ದು, ಮುಂದಿನ ಚುನಾವಣೆ ವೇಳೆಗೆ ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.


0 Comments