ಕೊರೋನಾ ಕಾರಣದಿಂದ ಶಾಲೆಗಳು ಬಂದ್ ಆಗಿ ವರ್ಷವೇ ಕಳೆದಿದೆ, ಶಾಲೆಗಳು ಎಂದರೆ ಕೇವಲ ಶಿಕ್ಷಣ ನೀಡುವ ಕೇಂದ್ರಗಳಷ್ಟೇ ಆಗಿರದೆ ಶಿಕ್ಷಕರು ಹಾಗೂ ಮಕ್ಕಳ ನಡುವೆ ವಿಶೇಷ ಬಾಂಧವ್ಯ ವೇದಿಕೆ ಹಾಗೂ ಮಕ್ಕಳಿಗೆ ನೈತಿಕ ಮೌಲ್ಯ ತಿಳಿಸುವ ಕೇಂದ್ರಗಳು ಸಹ‌. ಕಳೆದ ಒಂದು ವರ್ಷದಿಂದ ಶಿಕ್ಷಕರು ಹಾಗೂ ಮಕ್ಕಳ ನಡುವೆ ಸಂಪರ್ಕ ಕೊಂಡಿಯಾಗಿದ್ದ ಶಾಲೆಗಳು ಮುಚ್ಚಿರುವ ಕಾರಣ ಶಿಕ್ಷಕರು ಹಾಗೂ ಮಕ್ಕಳು ಇಬ್ಬರೂ ಹಳೆಯ ನೆನಪಿನ ಬುತ್ತಿಯನ್ನು ನೆನಪಿಸಿಕೊಳ್ಳಲು ಜೊತೆಗೆ ಜಾಗರೂಕತೆಯೆ ಸಲಹೆ ನೀಡಲು ಕಾಫಿನಾಡಿನ ಶಿಕ್ಷಕಿಯೋರ್ವರು ಮಾಡಿರುವ ಈ ಕೆಲಸ ಜನರಿಂದ ಪ್ರಶಂಸೆಗೆ ಒಳಗಾಗಿರುವುದಷ್ಟೇ ಅಲ್ಲದೇ ಶಿಕ್ಷಣ ಸಚಿವರಿಂದರೂ ಶಹಬ್ಬಾಸ್ ಗಿರಿ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನ  ಸಮೀಪದ ಯಲಗುಡಿಗೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಗೀತಾ ಎಂಬುವವರು ಯಲಗುಡಿಗೆ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಯ ವಿದ್ಯಾರ್ಥಿಗಳಿಗೆ  ಇವರು ಪಾಠ ಮಾಡುತ್ತಾರೆ. ಕೊರೋನಾ ಕಾಲದಲ್ಲಿ ಎಲ್ಲರೂ ಮನೆಯಲ್ಲೇ ಲಾಕ್ ಆಗಿ ಶಾಲೆಗೆ ಹೋಗಲಾರದೆ ಮಕ್ಕಳು ತಮ್ಮ ಸ್ನೇಹಿತರು ಹಾಗೂ ತಮ್ಮ ಮೆಚ್ಚಿನ ಶಿಕ್ಷಕರನ್ನ ಮಿಸ್ ಮಾಡಿಕೊಳ್ತಿದ್ದಾರೆ. ಹಾಗಾಗಿ ಗೀತಾ ಅವರು ತಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ಪ್ರೀತಿಯ ಪತ್ರ ಬರೆದು ಆಶ್ಚರ್ಯ ಮೂಡಿಸಿದ್ದಾರೆ. ತಾನು ಮನೆಯಲ್ಲಿದ್ದಾಗಲೂ ತನ್ನ ಹೆಸರಿಗೆ ಪತ್ರ ಬರೆದ ಶಿಕ್ಷಕಿಯ ಬಗ್ಗೆ ವಿದ್ಯಾರ್ಥಿಗಳ ಸಂತೋಷಕ್ಕೂ ಪಾರವೇ ಇಲ್ಲದಂತಾಗಿದೆ.

ಪ್ರತಿಯೊಂದು ಮಕ್ಕಳ ಜೊತೆಗಿನ ಶಾಲೆಯಲ್ಲಿನ ಹಳೆಯ ನೆನಪುಗಳ ಬುತ್ತಿಯನ್ನು ಪತ್ರದಲ್ಲಿ ನೆನಪಿಸಿದ್ದಾರೆ. ಶಾಲೆಯ ಪ್ರತಿಯೊಂದು ಮಗುವಿಗೂ ಪತ್ರ ಬರೆದು ಆತ್ಮಸ್ಥೈರ್ಯ ತುಂಬಿದ್ದಾರೆ. ಮಕ್ಕಳ ಹಾಗೂ ಪೋಷಕರ ಯೋಗಕ್ಷೇಮ ವಿಚಾರಿಸಿ, ಕೊರೊನಾದಿಂದ ಮನೆಯಲ್ಲೇ ಇದ್ದರೂ ಈ ಮೂಲಕ ಮಕ್ಕಳು ಹಾಗೂ ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಿದ್ದಾರೆ. ಇದಕ್ಕೆ ಮಕ್ಕಳೂ ಖುಷಿ ಪಟ್ಟು ಮರು ಪತ್ರ ಬರೆಯುವುದನ್ನು ನೋಡಿ ಶಿಕ್ಷಕಿ ಗೀತಾ ಸಹ ಸಂತಸ ಪಟ್ಟಿದ್ದಾರೆ. ಶಿಕ್ಷಕಿ ಗೀತಾ ಪತ್ರದಲ್ಲಿ ಕೊರೊನಾದ ಬಗ್ಗೆ ಎಚ್ಚರ ವಹಿಸುವಂತೆಯೂ ಕಿವಿಮಾತು ಹೇಳಿದ್ದಾರೆ. ರಜೆ ಇರುವುದರಿಂದ ಬಾವಿ, ಕೆರೆ, ದೂರದ ಸ್ಥಳಗಳಿಗೆ ಆಟವಾಡಲು ಹೋಗದಂತೆಯೂ ಪತ್ರದಲ್ಲಿ ತಿಳಿ ಹೇಳಿದ್ದಾರೆ. ಹಾಗೆಯೇ ಮೊಬೈಲನ್ನೂ ಕೂಡ ಅಗತ್ಯಕ್ಕಿಂತ ಹೆಚ್ಚು ಬಳಸದಂತೆ ಮಕ್ಕಳಿಗೆ ತಿಳಿ ಹೇಳಿದ್ದಾರೆ. 

ಶಿಕ್ಷಕಿ ಗೀತಾ ಅವರಿಗೂ ಮಕ್ಕಳು ಪ್ರೀತಿಯಿಂದ ಪತ್ರ ಬರೆದು ಖುಷಿ ಪಟ್ಟಿದ್ದಾರೆ. ನಾವೆಲ್ಲಾ ಆರೋಗ್ಯವಾಗಿದ್ದೇವೆ, ನೀವು ಕೂಡ ಕ್ಷೇಮವಾಗಿರಿ ಎಂದು ಮಕ್ಕಳು ಕೂಡ ಶಿಕ್ಷಕಿಗೆ ಪ್ರೀತಿಯ ಪತ್ರ ಬರೆದಿದ್ದಾರೆ. ಮಕ್ಕಳ ಪತ್ರ ಕಂಡು ಶಿಕ್ಷಕಿ ಕೂಡ ಸಂತೋಷಪಟ್ಟಿದ್ದಾರೆ. ನಾಲ್ಕು ದಿನ ಹಗಲಿರುಳು ಪತ್ರ ಬರೆದಿದ್ದಕ್ಕೆ ಮಕ್ಕಳು ಸಂತೋಷ ಪಟ್ಟಿದ್ದಾರೆ. ನನಗೂ ಸಂತೋಷವಾಯ್ತು ಎಂದು ಶಿಕ್ಷಕಿ ಗೀತಾ ಕೂಡ ಸಂಭ್ರಮಿಸಿದ್ದಾರೆ. ಈ ಶಾಲೆಯಲ್ಲಿ ಒಟ್ಟು 16 ಮಕ್ಕಳು  ಕಲಿಯುತ್ತಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಕಿ ಪತ್ರ ಬರೆದಿದ್ದಾರೆ.

ಲಾಕ್ಡೌನ್ ಇರುವ ಕಾರಣ ಮಕ್ಕಳು ಮರು ಪತ್ರ ಬರೆಯಲು ಶಿಕ್ಷಕಿ ತಾನು ಬರೆದ ಪತ್ರದಲ್ಲಿ ಖಾಲಿ ಇನ್ಲ್ಯಾಂಡ್ ಲೆಟರ್ ಕೂಡ ಕಳಿಸಿದ್ರು.  ಮಕ್ಕಳಿಗೆ ಹೊರಗಿನಿಂದ ಲೆಟರ್ ತರಲು ಆಗಲ್ಲ ಎಂದು ಪತ್ರದಲ್ಲಿ ತನ್ನ ಮನೆ ವಿಳಾಸ ಬರೆದು ಖಾಲಿ ಪತ್ರವನ್ನೂ ಹಾಕಿ ಕಳಿಸಿದ್ದರು. ಸದ್ಯ ಒಂದೊಂದು ಮಗು ಕೂಡ ರಿಪ್ಲೆ ಮಾಡುತ್ತಿದ್ದು ಶಿಕ್ಷಕಿಗೂ ಸಂತಸವಾಗಿದೆ. ಶಿಕ್ಷಕಿಯ ಪತ್ರ ಮಕ್ಕಳು ಹಾಗೂ ಶಿಕ್ಷಕರ ಮಧ್ಯೆ ಹೊಸ ಬಾಂಧವ್ಯ ಬೆಸೆದಿದೆ. ಶಾಲೆಯಿಂದ ದೂರ ಉಳಿದ ಪ್ರತಿಯೊಂದು ಮಗುವಿಗೂ ಪತ್ರ ಬರೆದ ಶಿಕ್ಷಕಿಯ ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಇಂತಹ ಹೃದಯವಂತ ಶಿಕ್ಷಕಿಯನ್ನು ಪಡೆದ ಈ ನಾಡು ಧನ್ಯ ಎಂದು ಶಿಕ್ಷಕಿಯ ಈ ಕೆಲಸಕ್ಕೆ ಶಹಬ್ಬಾಸ್ ಗಿರಿ ನೀಡಿದ್ದಾರೆ.