ಚಿಕ್ಕಮಗಳೂರು: ರಾಜ್ಯಾದ್ಯಂತ ಕೊರೋನಾ ಕೇಸ್ ಗಳ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿದೆ ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಒಂದು ತಿಂಗಳಿಂದಲೂ ಸರಾಸರಿ 500ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೇ ಜಿಲ್ಲೆಯಲ್ಲಿ ಅನೇಕರು ಬೆಡ್ ಸಿಗದೇ ಪರದಾಡಿರುವ ಪ್ರಕರಣಗಳು ಬೆಳಕಿಗೆ ಬಂದಿತ್ತು ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್‌ ವಾರ್ಡ್‌ಗಳಲ್ಲಿ ಹಾಸಿಗೆ ಲಭ್ಯತೆ (ಖಾಲಿ, ಭರ್ತಿ) ಮಾಹಿತಿಗೆ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ. www.surakshackm.com ಈ ವೆಬ್‌ನಲ್ಲಿ ಮಾಹಿತಿ ಪಡೆಯಬಹುದಾಗಿದೆ. ವೆಬ್‌ಸೈಟ್‌ಗೆ ಗುರುವಾರ ಚಾಲನೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ಮಾಹಿತಿ ಲಭ್ಯವಿದೆ.

ಈ ವೆಬ್‍ಸೈಟ್‍ನಲ್ಲಿ ಜಿಲ್ಲೆಯಲ್ಲಿ ಕೊರೋನ ಸೋಂಕಿತರಿಗೆ ಲಭ್ಯ ಇರುವ ಬೆಡ್‍ಗಳ ಸಂಖ್ಯೆ, ಖಾಲಿ ಇರುವ ಆಕ್ಸಿಜನ್ ಬೆಡ್‍ಗಳ ಸಂಖ್ಯೆ, ಕೊರೋನ ಸೋಂಕಿಗೆ ಯಾವ ಯಾವ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತದೆ, ಬೆಡ್ ಸಿಗದಿದ್ದಲ್ಲಿ ಯಾರ ನೆರವು ಪಡೆದುಕೊಳ್ಳಬೇಕು, ಆರೋಗ್ಯ ವಿಮೆಯಡಿಯಲ್ಲಿ ಚಿಕಿತ್ಸೆ ಪಡೆಯುವ ವಿಧಾನ ಮತ್ತಿತರ ಮಾಹಿತಿಗಳು ಸಾರ್ವಜನಿಕರಿಗೆ ಸಿಗಲಿದ್ದು, ಸೋಂಕಿತರ ಸಂಬಂಧಿಗಳು ನೆರವಿಗೆ ಸಂಪರ್ಕಿಸಬೇಕಾದ ನೋಡಲ್ ಅಧಿಕಾರಿಗಳ ಮೊಬೈಲ್ ನಂಬರ್ ಗಳನ್ನೂ ಈ ವೆಬ್‍ಸೈಟ್‍ನಲ್ಲಿ ನೀಡಲಾಗಿದೆ.

ಖಾಸಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರು ಚಿಕಿತ್ಸೆಗೆ ದಾಖಲಾಗುವ ಸಂದರ್ಭದಲ್ಲಿ ಬೆಡ್ ಸಿಗದ ಕುರಿತು ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ತುತ್ತಾದ ವ್ಯಕ್ತಿಯ ಕುಟುಂಬದವರು ಹಾಸಿಗೆ ಲಭ್ಯವಿರುವ ಆಸ್ಪತ್ರೆಯನ್ನು ಹುಡುಕಲು ಪರದಾಡಬೇಕಿತ್ತು. ಇದನ್ನು ತಪ್ಪಿಸಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ನೇತೃತ್ವದಲ್ಲಿ ವೆಬ್‍ಸೈಟ್ ಆರಂಭಿಸಿದ್ದು, ಇಂದಿನಿಂದ ಅದು ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.

ಈ ಮೊದಲು ಕೊರೋನಾ ಸೋಂಕಿತ ವ್ಯಕ್ತಿ ಜಿಲ್ಲಾಸ್ಪತ್ರೆಗೆ ಬಂದಾಕ್ಷಣ ಅವರ ಕೈಗೆ ಸಂಬಂಧಿಸಿದ ವೈದ್ಯರು ಸ್ಲಿಪ್ ಬರೆದು ಕೊಡುತ್ತಿದ್ದರು. ಅದನ್ನು ಹಿಡಿದುಕೊಂಡು ಸೋಂಕಿತ ವ್ಯಕ್ತಿಯ ಸಿಬ್ಬಂದಿ ವಿವಿಧ ಆಸ್ಪತ್ರೆಗಳ ಬಾಗಿಲ ಬಳಿ ತೆರಳಿ ಹಾಸಿಗೆಗಾಗಿ ವೈದ್ಯರು ಮತ್ತು ಆಡಳಿತ ಮಂಡಳಿ ಬಳಿ ಅಂಗಲಾಚಬೇಕಾಗಿತ್ತು. ಅಲ್ಲಿ ಹಾಸಿಗೆ ಲಭ್ಯವಿದ್ದರೂ ಸೋಂಕಿತ ವ್ಯಕ್ತಿಯ ಕುಟುಂಬದವರನ್ನು ಕಾಯಿಸಿ, ಸತಾಯಿಸುತ್ತಿದ್ದ ಘಟನೆಗಳು ಈ ಹಿಂದೆ ಜಿಲ್ಲೆಯಲ್ಲೂ ವರದಿಯಾಗಿದ್ದವು. ಹಾಗಾಗಿ ಕೊರೋನ ಸೋಂಕಿಗೆ ತುತ್ತಾದ ವ್ಯಕ್ತಿ ಹಾಸಿಗೆಗಾಗಿ ಪರದಾಡುವುದನ್ನು ತಪ್ಪಿಸಲು ಜಿಲ್ಲಾಡಳಿತ ಜಿಲ್ಲೆಯ ವಿವಿಧ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಬೆಡ್‍ಗಳ ಸಂಖ್ಯೆ ಮತ್ತಿತರ ಮಾಹಿತಿಗಳನ್ನೊಳಗೊಂಡ ವೆಬ್‍ಸೈಟ್‍ ಆರಂಭಗೊಂಡಿದೆ.