ಚಿಕ್ಕಮಗಳೂರು : ಕೊರೋನಾ ಸೋಂಕಿಗೆ ತುತ್ತಾದ ಜಿಲ್ಲೆಯ 13 ಪತ್ರಕರ್ತರಿಗೆ ತುರ್ತು ಚಿಕಿತ್ಸೆಗಾಗಿ ತಲಾ 5 ಸಾವಿರದಂತೆ ಒಟ್ಟು 65 ಸಾವಿರ ರೂ ಆರ್ಥಿಕ ನೆರವನ್ನು ನೀಡಲಾಗಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಎಂ. ರಾಜಶೇಖರ್ ಹೇಳಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘವು ಹಿಂದಿನಿಂದಲೂ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸ್ಪಂದಿಸುವುದು ಕೆಲಸ ಮಾಡಿಕೊಂಡು ಬರುತ್ತಿದೆ, ಅಲ್ಲದೇ ಅದು ಸಂಘದ ಜವಾಬ್ದಾರಿ ಕೂಡ ಆಗಿದೆ. ಜಿಲ್ಲಾ ಸಂಘದ ಇತಿಮಿತಿಯಲ್ಲಿ ದಾಖಲೆಗಳ ಆಧಾರದ ಮೇಲೆ ಕೊರೋನಾ ಸೋಂಕಿಗೆ ತುತ್ತಾದ 13 ಪತ್ರಕರ್ತರಿಗೆ ತಲಾ 5,000 ಆರ್ಥಿಕ ನೆರವನ್ನು ಜಿಲ್ಲಾ ಸಂಘವು ಯಾವುದೇ ರಾಜಕಾರಣಿಗಳು, ದಾನಿಗಳ ಸಹಾಯ ಪಡೆಯದೆ ಸಹಾಯ ನೀಡುತ್ತಿದೆ ಎಂದು ರಾಜಶೇಖರ್ ಹೇಳಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘವು ಇದುವರೆಗೂ ಇತರೆ ಸೌಲಭ್ಯ ಹೊರತು ಪಡಿಸಿ ತುರ್ತು ಚಿಕಿತ್ಸೆಗಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ 63 ಪತ್ರಕರ್ತರಿಗೆ ಆರ್ಥಿಕ ನೆರವು ನೀಡುವ ಮೂಲಕ ಸ್ಪಂದಿಸಿದೆ. ಇದಲ್ಲದೆ ಪತ್ರಕರ್ತರು ನಿಧನ ಹೊಂದಿದಾಗ ಕುಟುಂಬದ ದುಃಖದಲ್ಲಿ ಭಾಗಿಯಾಗಿ ಅಂತ್ಯಕ್ರಿಯೆಗೆ ಧನಸಹಾಯ ನೀಡುತ್ತಿದೆ ಎಂದಿದ್ದಾರೆ.

 www.newsmalnad.com 

ಕೊರೋನಾ ಪತ್ರಕರ್ತರನ್ನು ಹೊರತಾಗಿಲ್ಲ, ಜಿಲ್ಲೆಯಲ್ಲಿ ಫ್ರೆಂಟ್ ಲೈನ್ ವಾರಿಯರ್ಸ್ ಆಗಿ ದುಡಿಯುತ್ತಿರುವ ಪತ್ರಕರ್ತರಲ್ಲಿ 13 ಮಂದಿಗೆ ಸೋಂಕು ತಗಲಿದ್ದು. ಇಬ್ಬರು ಪತ್ರಕರ್ತರು ಮೃತಪಟ್ಟರೆ 11 ಪತ್ರಕರ್ತರಲ್ಲಿ ಕೆಲವರು ಚಿಕಿತ್ಸೆಯಲ್ಲಿದ್ದರೆ ಕೆಲವರು ಗುಣಮುಖರಾಗಿದ್ದಾರೆ. ಜಿಲ್ಲಾ ಸಂಘವು ನಿರಂತರವಾಗಿ ಪತ್ರಕರ್ತರಿಗೆ ಚಿಕಿತ್ಸೆ ಕುರಿತಂತೆ ವೈದ್ಯರ ಸಂಪರ್ಕ, ಮೆಡಿಸನ್ ಸಿಗದಿದ್ದಲ್ಲಿ ಜಿಲ್ಲಾ ಸಂಘದ ಮೂಲಕ ನೆರವು, ಒಬ್ಬರೇ ಪತ್ರಕರ್ತರಿದ್ದಲ್ಲಿ ಅವರಿಗೆ ಊಟ-ತಿಂಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘವು ಸಂಘದ ಸದಸ್ಯರಿಗೆಂದು ಮಾನದಂಡ ಮಾಡಿಲ್ಲ ಜಿಲ್ಲೆಯ ಕರ್ತವ್ಯದಲ್ಲಿದ್ದ ಯಾವುದೇ ಪತ್ರಕರ್ತರು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರೆ ಅಂತವರಿಗೂ ದಾಖಲೆಗಳ ಆಧಾರದ ಮೇಲೆ ನೆರವು ನೀಡುತ್ತಿದೆ.

ಜಿಲ್ಲೆಯಲ್ಲಿ ಬಹುತೇಕ ಪತ್ರಕರ್ತರು ವ್ಯಾಕ್ಸಿನ್ ಪಡೆಯಲು ಜಿಲ್ಲಾ ಸಂಘವು ಕೆಲಸ ಮಾಡಿದ್ದು, ಉಳಿದವರಿಗೆ ವ್ಯವಸ್ಥೆ ಮಾಡಲಾಗುವುದೆಂದು ಸಂಘವು ತಿಳಿಸಿದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಇಂದಿನಿಂದಲೇ ಸಂಕಷ್ಟಕ್ಕೊಳಗಾದ ಪತ್ರಕರ್ತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್ ತಿಳಿಸಿದ್ದಾರೆ.