ಕುರ್ಚಿಗಾಗಿ ಕದನ ನಡೆಸುವುದನ್ನು ಬಿಟ್ಟು ಕೊರೋನಾ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಟೀಕಿಸಿದ್ದಾರೆ.

ರಾಜ್ಯದಲ್ಲಿ ಮೂರೂ ಪಕ್ಷಗಳ ಸದಸ್ಯರು ಸೇರಿ ಸರಕಾರ ರಚನೆ ಮಾಡಿರುವುದರಿಂದ ಸಚಿವರೊಬ್ಬರು ಮೂರೂ ಪಕ್ಷಗಳ ಸರ್ಕಾರ ಎಂದು ಟೀಕಿಸಿದ್ದಾರೆ. ಹಾಗೆ ಟೀಕೆ ಮಾಡಿರುವುದರಲ್ಲಿ ಅರ್ಥವಿದೆ ಎಂದು ವ್ಯಂಗ್ಯವಾಡಿದರು‌. 

ಕಳೆದ ಸಾಲಿನಲ್ಲಿ ಶಾಲಾ ಸಮವಸ್ತ್ರ, ಶೂ ಹಾಗೂ ಇತರೆ ಕಾರ್ಯಗಳಿಗೆ ಹಣ ಖರ್ಚು ಮಾಡಿಲ್ಲ. ಅದನ್ನೇ ಖಾಸಗಿ ಶಾಲಾ ಶಿಕ್ಷಕರಿಗೆ ನೀಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು. ಇನ್ನೇನು ಮುಂದಿನ ತಿಂಗಳು ಶಾಲೆಗಳು ಆರಂಭವಾಗುವುದಿದೆ ಆದರೆ ಈವರೆಗೂ ಬಹುತೇಕ ಶಿಕ್ಷಕರಿಗೆ ವ್ಯಾಕ್ಸಿನ್ ನೀಡಿಲ್ಲ, ಯಾವ ಧೈರ್ಯದಲ್ಲಿ ಶಿಕ್ಷಕರು ಶಾಲೆಗೆ ಹೋಗಬೇಕು ಎಂದು ಪ್ರಶ್ನಿಸಿದರು. ಪ್ರತಿದಿನ 250 ಶಿಕ್ಷಕರಿಗೆ ವ್ಯಾಕ್ಸಿನೇಷನ್ ನೀಡುವಂತೆಯೂ ಒತ್ತಾಯಿಸಿದರು 

ಇದುವರೆಗೂ ತಾಲೂಕು ಕೇಂದ್ರಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ, ಹೊರ ಜಿಲ್ಲೆಗಳಲ್ಲಿ ಹೋಗಿ ಅಲ್ಲಿಯೂ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತವು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.