ಚಿಕ್ಕಮಗಳೂರು: ರಾಜ್ಯದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅವರಿರುವಲ್ಲೆ ಸ್ಥಳೀಯವಾಗಿ ಲಸಿಕೆ ಹಾಕಲು ರಾಜ್ಯ ಸರ್ಕಾರ ಕ್ರಮಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಲದ ಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಲಾಕ್ಡೌನ್ ಪರಿಣಾಮವಾಗಿ ಕಾಲೇಜುಗಳು ಮುಚ್ಚಿವೆ ಈ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ತೆರಳಿರುವ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕೆಂದು ಗಿರೀಶ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಈ ಸಂಬಂಧ ಹೇಳಿಕೆ ನೀಡಿರುವ ಅವರು, ಪದವಿ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ಆಧ್ಯತೆ ಮೇರೆಗೆ ಲಸಿಕೆ ಕೊಡುವ ಸರ್ಕಾರದ ತೀರ್ಮಾನ ಸ್ವಾಗತಾರ್ಹವೇ ಆದರೂ ಕಾಲೇಜುಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ಅಂತಹ ವಿದ್ಯಾರ್ಥಿಗಳು ಈಗ ತಮ್ಮ ಕಾಲೇಜುಗಳಲ್ಲಿ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಅಭಿಯಾನ ನಡೆಯುವಾಗಲೇ ಎಲ್ಲಾ ವಿದ್ಯಾರ್ಥಿಗಳಿಗೂ ಲಸಿಕೆ ನೀಡುವುದು ಅತ್ಯಗತ್ಯ. ಲಸಿಕೆ ಪಡೆಯುವಲ್ಲಿ ವಂಚಿತರಾದವರಿಗೆ ಮುಂದೆ ಆಧ್ಯತೆ ಮೇರೆಗೆ ಮತ್ತೆ ಲಸಿಕೆ ಸಿಗುತ್ತದೆ ಎನ್ನುವುದು ಅನುಮಾನವೇ ಸರಿ. ಈ ಕಾರಣಕ್ಕೆ ರಾಜ್ಯ ಸರ್ಕಾರ ಈಗಲೇ ಈ ಕುರಿತು ಆಲೋಚಿಸಿ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಕಾಲೇಜು ಇರುವ ಸ್ಥಳದಿಂದ ಹೊರಕ್ಕೆ ಹೋಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈಗಲೇ ಲಸಿಕೆ ಹಾಕುವ ತೀರ್ಮಾನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ವಿದ್ಯಾರ್ಥಿಗಳು ಓದುತ್ತಿರುವ ಶಿಕ್ಷಣ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ ಸೇರಿದಂತೆ ಕಾಲೇಜಿಗೆ ಸಂಬಂಧಿಸಿದ ಇತರೆ ದಾಖಲೆಗಳನ್ನು ಪಡೆದು ಅವರು ಇರುವ ಸ್ಥಳದಲ್ಲೇ ಸ್ಥಳೀಯ ಕೇಂದ್ರದಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮುಂದೆ ಕಾಲೇಜು ಆರಂಭಗೊಂಡ ನಂತರ ಕಡ್ಡಾಯವಾಗಿ ಲಸಿಕೆ ಪಡೆದಿದ್ದರಷ್ಟೇ ಪ್ರವೇಶ ಎನ್ನುವ ನಿಯಮ ಜಾರಿಯಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಲಸಿಕೆ ಪಡೆಯದ ವಿದ್ಯಾರ್ಥಿಗಳು ಅತಂತ್ರರಾಗುವುದು ಅಲ್ಲದೆ ತರಾತುರಿಯಲ್ಲಿ ಲಸಿಕೆ ಪಡೆಯಲು ಪರದಾಡುವುದನ್ನು ತಪ್ಪಿಸುವ ಸಲುವಾಗಿ ಕೂಡಲೇ ಸರ್ಕಾರ ಈ ತೀರ್ಮಾನಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರದ ಪ್ರತಿಕ್ರಿಯೆಯು ಅವಶ್ಯವಾಗಿ ದೊರಕಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.


0 Comments