ಚಿಕ್ಕಮಗಳೂರು: ಕೊರೋನದ ಈ ಸಂಕಷ್ಟ ಸಂದರ್ಭದಲ್ಲಿ,ಘನ ಸರ್ಕಾರವು ಅರೆಬರೆ ನೆರವು ನೀಡುವುದು ಬಿಟ್ಟು, ಸಮಗ್ರ ಪ್ಯಾಕೇಜ್ ಘೋಷಿಸಬೇಕು. ಬಡ ಕುಟುಂಬಗಳಿಗೆ ₹5000 ಪರಿಹಾರ ನೀಡಬೇಕು ಎಂದು ಜನಾಗ್ರಹ ಆಂದೋಲನ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು, ಹಾಗೂ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಜನಾಗ್ರಹ ಆಂದೋಲನ ಸಮಿತಿಯೊಂದಿಗೆ ಬೆರೆತು ಪ್ರತಿಭಟಿಸಿದರು.ಚಿಕ್ಕಮಗಳೂರು ನಗರದ ಜಿಲ್ಲಾ ನ್ಯಾಯಾಲಯ ಸಮೀಪದ ಮಹಾತ್ಮ ಗಾಂಧಿ ಉದ್ಯಾನದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಜ್ಯದಲ್ಲಿ ಗತಿಗೆಟ್ಟ ರೀತಿಯಲ್ಲಿ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್‌ಗೆ ಉಚಿತ ಚಿಕಿತ್ಸೆ ನೀಡಬೇಕು. ಎಲ್ಲ ವಯಸ್ಸಿನವರಿಗೂ ಲಸಿಕೆ ನೀಡಬೇಕು. ಕೋವಿಡ್‌ನಿಂದಾಗಿ ಮನೆಯ ಯಜಮಾನ ಮೃತಪಟ್ಟಿದ್ದರೆ, ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ನೀಡಬೇಕು. ಬಿತ್ತನೆಬೀಜ, ರಸಗೊಬ್ಬರಗಳಿಗೆ ವಿಶೇಷ ಸಹಾಯಧನ ಘೋಷಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಕೋವಿಡ್ ಚಿಕಿತ್ಸೆಗೆಗಾಗಿ ಜನರು ಸಾಲ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಸರ್ಕಾರವು ಸಮಸ್ಯೆಯ ಅಗಾಧತೆ ಅರ್ಥ ಮಾಡಿಕೊಳ್ಳಬೇಕು. ಕೇರಳ ಸರ್ಕಾರ 3.6 ಕೋಟಿ ಜನಸಂಖ್ಯೆಗೆ ₹20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದೆ. ಕರ್ನಾಟಕ ಸರ್ಕಾರ ರಾಜ್ಯದ 6.8 ಕೋಟಿ ಜನಸಂಖ್ಯೆಗೆ ಕನಿಷ್ಠ ₹2 ಸಾವಿರ ಕೋಟಿ ನೆರವನ್ನೂ ಘೋಷಿಸಿಲ್ಲ ಎಂದರು. ಬಿಎಸ್‌ಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಹಸಿರುಸೇನೆ–ರೈತ ಸಂಘದ ಜಿಲ್ಲಾಘಟಕದ ಡಿ.ಆರ್.ದುಗ್ಗಪ್ಪಗೌಡ, ಮುಖಂಡರಾದ ಚಂದ್ರಪ್ಪ, ಯೂಸೂಫ್‌ಹಾಜಿ, ಅಜ್ಮತ್‌ಪಾಶ, ಕೃಷ್ಣಮೂರ್ತಿ, ಗಣೇಶ್ ಇದ್ದರು.



0 Comments