ಸರ್ಫೇಸಿ ಕಾಯ್ದೆಯಿಂದ ಕೃಷಿ ವಲಯ ಕೈ ಬಿಡುವಂತೆ ಒತ್ತಾಯಿಸಿ ಮಲೆನಾಡಿನ ಎಲ್ಲಾ ಭಾಗಗಳಲ್ಲಿ ರಾಜಕೀಯೇತರ ಪೋಸ್ಟ್ ಕಾರ್ಡ್ ಚಳುವಳಿ ಮಾಡುತ್ತಿದ್ದು ಇದುವರೆಗೂ 12ಸಾವಿರಕ್ಕಿಂತ ಹೆಚ್ಚು ಪೋಸ್ಟ್ ಕಾರ್ಡ್ ಗಳನ್ನು ಪೋಸ್ಟ್ ಮಾಡುವ ಮೂಲಕ ಯಶಸ್ವಿ ಅಭಿಯಾನ ನಡೆದಿದೆ.ಸರ್ಫೇಸಿ ಕಾಯ್ದೆಯು, ಬ್ಯಾಂಕುಗಳಿಗೆ ಸುಸ್ತಿಯಾದ ಕೃಷಿ ಸಾಲವನ್ನು ನೋಟೀಸು ನೀಡಿದ 60 ದಿನಗಳ ಒಳಗಾಗಿ ನ್ಯಾಯಾಲಯವನ್ನು ಸಂಪರ್ಕಿಸದೆ ನೇರವಾಗಿ ಹರಾಜು ಹಾಕಿಕೊಂಡು ತಮ್ಮ ಸಾಲದ ಮೊತ್ತವನ್ನು ಮುರಿದುಕೊಳ್ಳಬಹುದು ಎಂಬ ಅಧಿಕಾರವನ್ನು ನೀಡುತ್ತದೆ. 

ಹವಾಮಾನ ವೈಪರೀತ್ಯ, ಹಳದಿ ಎಲೆ ರೋಗ, ಬೇರು ಹುಳ ರೋಗ, ಹಾಗೂ ಬೆಲೆ ನಷ್ಟದಿಂದಾಗಿ ಕೃಷಿ ಆರ್ಥಿಕತೆಯ ನಷ್ಟಕ್ಕೊಳಗಾಗಿ ಬ್ಯಾಂಕಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇರುತ್ತಾನೆಯೇ ಹೊರತು, ಬ್ಯಾಂಕಿಗೆ ಮೋಸಮಾಡಬೇಕೆಂಬ ಉದ್ದೇಶವಿರುವುದಿಲ್ಲ. ಆದರೆ ಸಾಲ ಮರುಪಾವತಿ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ರೈತನಿಗೆ ನಿರೂಪಿಸಲು ಹಾಗೂ ನ್ಯಾಯಾಲಯಕ್ಕೆ ಮೊರೆಹೋಗುವ ಅವಕಾಶವನ್ನೇ ನೀಡದೇ ಏಕಾಏಕಿ ಹರಾಜು ನಡೆಸುವ ಅಧಿಕಾರವನ್ನು ಬ್ಯಾಂಕುಗಳಿಗೆ ನೀಡಿದರೆ ಅದು ಅಸಹಾಯಕ ರೈತನ ಅಂತ್ಯಕ್ಕೆ ಮುನ್ನುಡಿ ಬರೆದಂತೆ ಎಂಬುದು ಕೃಷಿಕರ ಅಳಲು.



ಮುಂದಿನ ದಿನಗಳಲ್ಲಿ ಕೃಷಿಕರ ಬದುಕು ಮೂರಾಬಟ್ಟೆಯಾಗದಂತೆ ತಡೆಯಲು ಚಿಕ್ಕಮಗಳೂರಿನ ಕೃಷಿಕ ಸಮುದಾಯದ ವತಿಯಿಂದ ಪೋಸ್ಟ್ ಕಾರ್ಡ್ ಚಳುವಳಿಯನ್ನು ರೂಪಿಸಿದ್ದು, ಈ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಕೃಷಿಯನ್ನು ಇದರಿಂದ ಹೊರತುಪಡಿಸಬೇಕೆಂದು ಒತ್ತಾಯಿಸಿ ಮಾನ್ಯ ಪ್ರಧಾನಮಂತ್ರಿಗಳನ್ನು ಹಾಗೂ ಮುಖ್ಯಮಂತ್ರಿಗಳನ್ನು ಈ ವಿಚಾರದ ಬಗ್ಗೆ ಗಮನ ಸಳೆಯಲು ಪೋಸ್ಟ್ ಕಾರ್ಡ್ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತೀ ಹಳ್ಳಿಗಳ ರೈತರಿಂದ ಪೋಸ್ಟ್ ಕಾರ್ಡ್ ಗಳನ್ನು ಬರೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ.ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡದಿಂದ ಬ್ಯಾಂಕ್ ಗಳು ಸಣ್ಣ ಸಣ್ಣ ರೈತರ ಸಾಲಕ್ಕೆ ಸಹ ನೋಟಿಸ್ ನೀಡಿ ಮುಟ್ಟುಗೋಲು ಹಾಕಿಕೊಳ್ಳಲು ಪ್ರಯತ್ನಿಸುತ್ತಿವೆ. ಈ ಕಾಯ್ದೆಯ ವಿರುದ್ಧ ವಾಗಿ ನಮ್ಮ ಹೋರಾಟವಲ್ಲ ಬದಲಾಗಿ ಈ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಇದರಿಂದ ಕೃಷಿಯನ್ನು ಹೊರಗಿಡಬೇಕು ಎಂಬುದು ರೈತವರ್ಗದ ಮನವಿ.