ಚಿಕ್ಕಮಗಳೂರು: ಕೊರೋನಾ ಲಸಿಕೆ ಪಡೆದುಕೊಳ್ಳಿ ಎಂದು ಸರ್ಕಾರವು ವ್ಯಾಪಕವಾಗಿ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಲಸಿಕೆಗಾಗಿ ಟೋಕನ್ ಕೂಡ ಸಿಗದೇ ಜನರು ಪರದಾಡುತ್ತಿದ್ದಾರೆ.
ಚಿಕ್ಕಮಗಳೂರಿನ ಆರೋಗ್ಯ ಕೇಂದ್ರದಲ್ಲಿ ಹಲವು ದಿನಗಳಿಂದ ಟೋಕನ್ ಸಹ ಸಿಗದೇ ಪರದಾಡಿದ ಗ್ರಾಮಸ್ಥರು, ಆರೋಗ್ಯ ಕೇಂದ್ರದ ಮುಂದೆಯೇ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ಮುಂಜಾನೆ 4 ಗಂಟೆಯಿಂದ ಕಾದರು ಲಸಿಕೆ ಸಿಗುತ್ತಿಲ್ಲ, ಖಾಸಗೀ ಆಸ್ಪತ್ರೆಗಳಲ್ಲಿ ಹಣ ನೀಡಿದರೆ ಲಸಿಕೆ ಸಿಗುತ್ತದೆ ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿಲ್ಲ, ಹಣವಂತರು ಎಷ್ಟಾದರೂ ಹಣವನ್ನು ನೀಡಿ ಲಸಿಕೆ ತೆಗೆದುಕೊಳ್ಳುತ್ತಾರೆ, ಆದರೆ ಬಡಜನರು ಏನು ಮಾಡುವುದು, ಎಲ್ಲಿಗೆ ಹೋಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಕೊರತೆ ಇರುವಾಗ ಖಾಸಗೀ ಆಸ್ಪತ್ರೆಯಲ್ಲಿ ಲಸಿಕೆ ಸಿಗುತ್ತಿವೆ ಎಂದರೆ ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಕಂಡುಬರುತ್ತಿದೆ.
ಮೆಡಿಕಲ್ ಮಾಫಿಯಾದ ಇನ್ನೊಂದು ಮುಖವೇ ಒಂದೆಡೆ ಬಡ ಜನರು ಉಚಿತ ಲಸಿಕೆಗಾಗಿ ಬೆಳಿಗ್ಗೆ 4ರಿಂದ ಬೀದಿಯಲ್ಲಿ ಲಸಿಕೆಗಾಗಿ ಕಾಯುತ್ತಿರುವುದು. ಇನ್ನೊಂದೆಡೆ ಖಾಸಗೀ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆ ಆಗುತ್ತಿರುವುದು ಎಂದು ಸ್ಥಳೀಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 4 ಗಂಟೆಯಿಂದ ಟೋಕನ್ ಗೆ ಕಾಯುತ್ತಲಿದ್ದರೆ, ಬೆಳಗ್ಗೆ 9 ಗಂಟೆಗೆ ಬಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಬಂದು ಕೇವಲ 200 ಟೋಕನ್ ಗಳನ್ನ ಹಂಚಿದರು, ಉಳಿದ ಇನ್ನೂರಕ್ಕೂ ಅಧಿಕ ಜನರಿಗೆ ಟೋಕನ್ ಸಿಗಲಿಲ್ಲ ಹೀಗಿರುವಾಗ ಉಳಿದವರು ಏನು ಮಾಡಬೇಕು, ಅತ್ತ ಕೆಲಸಕ್ಕೂ ಹೋಗಲಾಗುತ್ತಿಲ್ಲ ಎಂದು ಕೂಲಿ ಕಾರ್ಮಿಕ ವೃದ್ಧೆಯೊಬ್ಬರು ತಮ್ಮ ನೋವನ್ನು ಹೊರಹಾಕಿದರು.
ಬೈಕಿನ ಹೆಡ್ ಲೈಟ್ ಡಿಮ್-ಡಿಪ್ ಮಾಡಲಿಲ್ಲ ಎಂದು ಹಲ್ಲೆ : ಪ್ರಕರಣ ದಾಖಲು.
ಸುಳ್ಳು ಪೋಣಿಸುತ್ತಿರುವ ಜನಪ್ರತಿನಿಧಿಗಳು:
ಒಂದೆಡೆ ಜನರು ಲಸಿಕೆಗಾಗಿ ಕಾದು ಕಾದು ಸುಸ್ತಾಗುತ್ತಿದ್ದರೆ ಮತ್ತೊಂದೆಡೆ ಜನಪ್ರತಿನಿಧಿಗಳು ಸಭೆಗಳಲ್ಲಿ, ಪತ್ರಿಕಾ ಹೇಳಿಕೆಗಳಲ್ಲಿ ಲಸಿಕೆ ಕೊರತೆಯೇ ಇಲ್ಲ ಎಂಬ ಸುಳ್ಳು ಪೋಣಿಸುತ್ತಿದ್ದಾರೆ.ಬಹುಶಃ ತಮ್ಮ ಸಂಬಂಧಿಕರು ಮತ್ತು ಬೆಂಬಲಿಗರಿಗೆ ಲಸಿಕೆ ಕೊರತೆ ಇಲ್ಲ ಎನಿಸುತ್ತದೆ.18 ವರ್ಷ ಮೇಲ್ಪಟ್ಟವರಿಗೆ ಖಾಸಗೀ ಆಸ್ಪತ್ರೆಯಲ್ಲಿ ಲಸಿಕೆ ಸಿಗುತ್ತಿದೆ, ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಎಂದಿದು ಸ್ಥಳೀಯರಾದ ನಿತಿನ್ ಗೌಡ ಆರೋಪಿಸಿದರು.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿನ ಲಸಿಕಾ ಕೇಂದ್ರವನ್ನು ಮುಚ್ಚಲಾಗಿದೆ. ನಾಗರಿಕರು ಲಸಿಕೆಗಾಗಿ ನಗರದ ಮುನ್ಸಿಪಲ್ ಆಸ್ಪತ್ರೆಗಳಲ್ಲಿ ಸಾಲುಗಟ್ಟಿ ನಿಲ್ಲಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಮತ್ತೆ ಲಸಿಕಾ ಕೇಂದ್ರವನ್ನು ತೆರೆಯಬೇಕಿದೆ.
- ಕಾರ್ತಿಕಾದಿತ್ಯ ಬೆಳಗೋಡು, ಸಾಮಾಜಿಕ ಕಾರ್ಯಕರ್ತರು





0 Comments