ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಯ ಮಾಜಿ ಅಧ್ಯಕ್ಷರು, ಅಮ್ಮ ಫೌಂಡೇಶನ್ ಸಂಸ್ಥಾಪಕರೂ ಆದ ಸುಧಾಕರ್ ಎಸ್ ಶೆಟ್ಟಿ ಅವರ ಫೇಸ್ಬುಕ್ ಖಾತೆಯಲ್ಲಿನ ಫೋಟೋಗಳನ್ನು ಬಳಸಿಕೊಂಡು ಅವರದ್ದೇ ಹೆಸರಿನಲ್ಲಿ ನಕಲಿ ಖಾತೆಯೊಂದನ್ನು ಸೃಷ್ಟಿಸಿ ಹಣಕ್ಕೆ ಒತ್ತಾಯಿಸಿದ್ದಾರೆ.

ನಕಲಿ ಖಾತೆ ಸೃಷ್ಟಿಸಿ ಉದ್ಯಮಿ ಸುಧಾಕರ್ ಶೆಟ್ಟಿ ಅವರಿಗೆ ಆತ್ಮೀಯವಾದವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ, ಮೆಸೆಂಜರ್ ಮೂಲಕ ಹೇಗಿದ್ದೀರಾ, ಎಲ್ಲಿದ್ದೀರಾ ಎಂದೆಲ್ಲಾ ವಿಚಾರಿಸಿ ಬಳಿಕ ನನ್ನ ಬ್ಯಾಂಕ್ ಸರ್ವರ್ ಬಿಝಿ ಇದೆ, ಈಗ 60,500 ರೂ ಕಳಿಸಿ ನಾಳೆ ಬೆಳಗ್ಗೆ ನಿಮಗೆ ವಾಪಾಸ್ ಮಾಡುತ್ತೇನೆ ಎಂದು ಖದೀಮರು ಹಣದ ಬೇಡಿಕೆ ಇಟ್ಟಿದ್ದಾರೆ. ಈ ಮೋಸದ ಜಾಲವನ್ನು ಅರಿತ ಅವರ ಸ್ನೇಹಿತರು ಸುಧಾಕರ್ ಶೆಟ್ಟಿ ಅವರ ಗಮನಕ್ಕೆ ತಂದಿದ್ದಾರೆ.

ಇತ್ತೀಚೆಗೆ ನಕಲಿ ಖಾತೆ ಬಳಸಿ ಹಣವನ್ನು ಪಡೆಯುವುದಕ್ಕೆ ಹೊಂಚು ಹಾಕುವುದು ಹೆಚ್ಚಾಗಿದೆ. ಜನಪ್ರತಿನಿಧಿಗಳು, ಉದ್ಯಮಿಗಳು ಮತ್ತು ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಹಣವನ್ನು ಸುಲಿಗೆ ಮಾಡಲಾಗುತ್ತಿದೆ. ಗೌಪ್ಯವಾಗಿ ಮೇಸೆಂಜರ್ ನಲ್ಲಿ ಬೇಡಿಕೆಯಿಟ್ಟು, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣವನ್ನು ಹಾಕಿಸಿಕೊಳ್ಳುವುದರಿಂದ ವಂಚನೆ ಪ್ರಕರಣ ಬೇಗ ಬೆಳಕಿಗೆ ಬರುವುದಿಲ್ಲ. ಇನ್ನು ಆತ್ಮೀಯರು, ಪ್ರಭಾವಿಗಳು, ದೊಡ್ಡವರು, ಗೆಳೆಯರು ಕೇಳುತ್ತಿರುವುದರಿಂದ ಹಣ ಕೊಟ್ಟವರು ಇತರರ ಬಳಿ ಹೇಳಿಕೊಳ್ಳುವುದಿಲ್ಲ.

ಸಾರ್ವಜನಿಕರು ಯಾವುದೇ ಕಾರಣಕ್ಕೂ ನಕಲಿ ಖಾತೆಯ ಫ್ರೆಂಡ್ ರಿಕ್ವೆಟ್ ಅಕ್ಸೆಪ್ಟ್ ಮಾಡಬಾರದು. ಹಾಗೆಯೇ ಯಾರೇ ಆಗಲಿ ಕೇಳಿದಾಗ ಹಣವನ್ನು ವರ್ಗಾವಣೆ ಮಾಡಬಾರದು ಎಂದು ಸುಧಾಕರ್ ಶೆಟ್ಟಿ ಅವರು ಮನವಿ ಮಾಡಿದ್ದಾರೆ.