ಮಲೆನಾಡಿನ ಈ ಗ್ರಾಮದ ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕವಿಲ್ಲ, ಕಳೆದ 70 ವರ್ಷಗಳಿಂದ ದೀಪದ ಬೆಳಕಲ್ಲೇ ಇವರ ಬದುಕು.ಆಧುನಿಕತೆ ಇಷ್ಟು ಮುಂದುವರೆದಿದ್ದರೂ ಓದು, ಕೆಲಸ ಸಹ ಇಂದಿಗೂ ದೀಪದ ಬೆಳಕಿನಲ್ಲಿಯೇ.

ಆದರೆ ಈಗ ಪ್ರಾರಂಭವಾಗಿರುವ ಆನ್ಲೈನ್ ಶಿಕ್ಷಣಕ್ಕೆ ವಿದ್ಯುತ್ ಅನಿವಾರ್ಯ, ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯವೇ ಮಂಕಾಗಿದೆ.ಮತ್ತೊಂದೆಡೆ ಈಗ ನೀಡುತ್ತಿರುವ ಒಂದು ಲೀಟರ್ ಸೀಮೆಎಣ್ಣೆಯಲ್ಲಿ ತಿಂಗಳು ಪೂರ್ತಿ ದೀಪ ಉರಿಸುವುದೂ ಸಾಧ್ಯವಿಲ್ಲವಾಗಿದೆ.

ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಮನವಿ ಮಾಡುವ ಮೂಲಕ ತಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊಪ್ಪ ತಾಲೂಕಿನ ಹರಳಾನೆ ಗ್ರಾಮದ ಮಾದ್ಲಬೈಲಿನ ಸುಮಾರು 6 ಮನೆಗಳ ಗ್ರಾಮಸ್ಥರು ಈ ಕುರಿತು ಮನವಿ ಸಲ್ಲಿಸಿದ್ದಾರೆ.

ವರ್ಷ ಕಳೆದರೂ ಮೀಟರ್ ಅಳವಡಿಸಿಲ್ಲ:

ಕೊಪ್ಪ ತಾಲೂಕಿನ ಬಿಟ್ನಮಕ್ಕಿಯ 18 ಕುಟುಂಬಗಳಿಗೆ ಕರೆಂಟ್ ಲೈನ್ ಮಾಡಿ 1 ವರ್ಷ ಕಳೆದರೂ ಇದುವರೆಗೂ ಮೀಟರ್ ಅಳವಡಿಸಿಲ್ಲ, ಈ ಕೂಡಲೇ ಮೀಟರ್ ಅಳವಡಿಕೆ ಮಾಡಿ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.