ವೈದ್ಯರ ಕೊರತೆಯಿಂದ ಕಂಗೆಟ್ಟಿದ್ದ ಶೃಂಗೇರಿ ತಾಲೂಕು ಆಸ್ಪತ್ರೆಗೆ ನೂತನವಾಗಿ ಐದು ಜನ ವೈದ್ಯರನ್ನು ನೇಮಕ ಮಾಡುವ ಮೂಲಕ ಸರ್ಕಾರ ಶೃಂಗೇರಿ ಜನತೆಗೆ ಸಿಹಿಸುದ್ದಿ ನೀಡಿದೆ.

ಹಲವು ವರ್ಷಗಳಿಂದ ಶೃಂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಉಂಟಾಗಿತ್ತು, ಈ ಹಿಂದೆ ತಾಲೂಕು ಆಡಳಿತ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಮಂಜುನಾಥ್ ಅವರು ಜೂನ್ ತಿಂಗಳಿನಲ್ಲಿ ನಿವೃತ್ತಿ ಹೊಂದಿದ ಕಾರಣ ಇನ್ನಷ್ಟು ವೈದ್ಯರ ಸಮಸ್ಯೆ ಎದುರಾಗಿತ್ತು, ಆದರೆ ಇಂದಿಗೆ ಈ ಸಮಸ್ಯೆ ಪರಿಹಾರಗೊಂಡಿದೆ.

ಕಳೆದ ಕೆಲವು ದಿನಗಳ ಹಿಂದೆ ಅರವಳಿಕೆ ತಜ್ಞರಾಗಿ ಡಾ. ಶ್ರೀನಿವಾಸ್ ನೇಮಕಗೊಂಡಿದ್ದರು. ಇಂದು ಮೂವರು ಎಂಬಿಬಿಎಸ್ ವೈದ್ಯರುಗಳಾದ ಡಾ.ಪ್ರಶಾಂತ್, ಡಾ.ಸುನಿಲ್ ಕುಮಾರ್, ಡಾ ಶೈಲೇಶ್ ಕುಮಾರ್, ಹಾಗೂ ಪ್ರಸೂತಿ ತಜ್ಞರಾದ ಡಾ. ಬಾಲಕೃಷ್ಣರನ್ನು ನೂತನವಾಗಿ ನೇಮಕ ಮಾಡಲಾಗಿದೆ.

ಡಾ. ಬಾಲಕೃಷ್ಣ ಅವರು ಈ ಹಿಂದೆ ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಆನಂತರ ಅಜ್ಜಂಪುರಕ್ಕೆ ವರ್ಗಾವಣೆಗೊಂಡು ಈಗ ಶೃಂಗೇರಿಗೆ ನಿಯೋಜನೆಗೊಂಡಿದ್ದಾರೆ.

ಪ್ರಸ್ತುತ ಡಾ. ದಯಾನಂದ್ ಅವರು ತಾಲೂಕು ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಆರೋಗ್ಯ ಸಚಿವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಶೃಂಗೇರಿಗೆ ಭೇಟಿ ನೀಡಿದಾಗ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಅಧ್ಯಕ್ಷರು ವೈದ್ಯರ ಕೊರತೆ ಕುರಿತು ಬೇಡಿಕೆಯನ್ನಿಟ್ಟಿದ್ದರು.

ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.