ಸಸಿ ಇದ್ದಲ್ಲಿ ಶೃಂಗೇರಿ ಕ್ಷೇತ್ರಕ್ಕೆ ಸೇರಿದ ಈ ಊರಿನ ರಸ್ತೆಯಲ್ಲಿಯೇ ನಾಟಿ ಮಾಡಬಹುದು.

ಕೊಪ್ಪ ತಾಲೂಕಿನ ಹಿರೇಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು ಮಾದರಿ ರಸ್ತೆ ಒಂದನ್ನು ನಿರ್ಮಿಸಿದ್ದಾರೆ. ಈ ಸುಗಮವಾದ ರಸ್ತೆ ಇರುವುದು ಗಂಟೆನಾಯ್ಕದಿಂದ ಅಡಿಗೆ ಬೈಲು ಸೊಸೈಟಿ ಗೆ ಹೋಗುವ ಮಧ್ಯದಲ್ಲಿ, ರಸ್ತೆ ಎಂದು ಹೆಸರಿಗೆ ಮಾತ್ರ ಕರೆಯಲ್ಪಡುವ ಈ ಜಾಗದಲ್ಲಿ ಸಸಿ ಇದ್ದರೆ ಸುಗಮವಾಗಿ ನಾಟಿ ಮಾಡಬಹುದು.

ಹದಿನೈದು ದಿನಗಳ ಹಿಂದೆಯೇ ಗ್ರಾಮಸ್ಥರು ಈ ದಾರಿಯನ್ನು ಸರಿ ಮಾಡಲು ದೂರು ನೀಡಿದ್ದರು. ಆ ದೂರಿಗೆ ಪ್ರತಿಯಾಗಿ ಪಂಚಾಯತಿ ವತಿಯಿಂದ ಗ್ರಾವೆಲ್ ಹಾಕಿ ರಸ್ತೆ ನಿರ್ಮಾಣ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದರು. ಆದರೆ ಆ ರಸ್ತೆ ನಿರ್ಮಾಣ ಮಾಡಿದ್ದು ಮಾತ್ರ ಕೇವಲ ಕೆಂಪು ಮಣ್ಣಿನಿಂದ. ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಈ ರಸ್ತೆಯು ಈಗ ಕೆಸರು ಗದ್ದೆಯಂತೆ ಮಾರ್ಪಾಡಾಗಿದೆ. 

ಮುಖ್ಯವಾಗಿ ಈ ರಸ್ತೆಯು ಹಿರೇಗದ್ದೆ ಪಂಚಾಯ್ತಿ, ಸೊಸೈಟಿ, ಮತ್ತು ಬಹುಮುಖ್ಯವಾದ ಮೇಲ್ಪಾಲ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ವಾಹನ ಸಂಚಾರ ಕೂಡ ಈ ರಸ್ತೆಯಲ್ಲೇ ಆಗಬೇಕಿದೆ. ಆಟೋ ಸಂಚಾರ ಸಹ ಸಾಧ್ಯವಾಗದ ಕಾರಣ ಸೊಸೈಟಿಯಿಂದ ಅಕ್ಕಿ ಬೇಳೆ ಪಡೆದವರು 20 -30 ಕೆಜಿಯ ಬ್ಯಾಗ್ ಅನ್ನು ಹೊತ್ತುಕೊಂಡೇ ತೆರಳಬೇಕಾಗಿದೆ. ಸಮರ್ಪಕವಾದ ರಸ್ತೆ ಇಲ್ಲದ ಕಾರಣ, ಎಲ್ಲರಿಗೂ ಈ ಕೆಸರಿನ ದಾರಿಯೇ ಸಂಪರ್ಕ ಸಾಧನವಾಗಿದೆ. ಆದಷ್ಟು ಬೇಗ ಈ ಕೆಸರಿನ ರಸ್ತೆಯನ್ನು  ಸರಿಪಡಿಸಿ ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.

ಈ ಕುರಿತು ನ್ಯೂಸ್ ಮಲ್ನಾಡ್ ಗೆ ಮಾಹಿತಿ ನೀಡಿದ ಸ್ಥಳೀಯರಾದ ರಂಜಿತ್ ತಳವಾನೆ, ಮಳೆಗಾಲದಲ್ಲಿ ಇಂತಹ ಕೆಲಸ ಮಾಡಿರುವುದು ತಪ್ಪು, ಮಣ್ಣಿನ ದಾರಿಯಿಂದಾಗಿ ವಯಸ್ಸಾದವರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ ಎಂದಿದ್ದಾರೆ.