ಚಿಕ್ಕಮಗಳೂರು: ಶೃಂಗೇರಿ ಆಸಿಡ್ ದಾಳಿ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಘೋಷಿಸಿ ಕೋರ್ಟ್ ತೀರ್ಪು ನೀಡಿದೆ. 

ಎಲ್ಲಾ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಲಕ್ಷದಂತೆ ಒಟ್ಟು 20 ಲಕ್ಷ ಮೊತ್ತದ ದಂಡವನ್ನು ವಿಧಿಸಲಾಗಿದೆ. ಮೇಲ್ಮನವಿ ಸಲ್ಲಿಸಬೇಕಾದಲ್ಲಿ ತಲಾ 2.50 ಲಕ್ಷ ದಂಡ ಪಾವತಿಸಿದ ನಂತರವಷ್ಟೇ ಅವಕಾಶ ಇದೆ. ಒಳಸಂಚು ರೂಪಿಸಿದ ಆರೋಪ ಸಹ ಸಾಬೀತಾಗಿದ್ದು, ಇದೇ ಶಿಕ್ಷೆ ಪ್ರಮಾಣದೊಳಗೆ ಸೇರಲ್ಪಟ್ಟಿರುತ್ತದೆ.

2015ರ ಏಪ್ರಿಲ್ 18ರಂದು ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇಂದಿಗೆ ಕಾಯ್ದಿರಿಸಿತ್ತು. ನ್ಯಾಯಾಧೀಶರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 2.50 ಲಕ್ಷ  ಮೊತ್ತದ ದಂಡವನ್ನು ವಿಧಿಸಲಾಗಿದೆ.ತೀರ್ಪು ಹೊರ ಬೀಳುತ್ತಿದ್ದಂತೆ ನಾಲ್ಕು ಮಂದಿ ಆರೋಪಿಗಳನ್ನು ಫೋಲೀಸರು ವಶಕ್ಕೆ ಪಡೆದು ಜೈಲಿಗೆ ಕಳಿಸಿದ್ದರು. ಗಣೇಶ್ ಅಲಿಯಾಸ್ ಗಣಿ (36), ಮಹಮ್ಮದ್ ಕಬೀರ್ (31), ವಿನೋದ್ ಕುಮಾರ್(38), ಹಾಗೂ ಅಬ್ದುಲ್ ವಾಜೀದ್(37) ಪ್ರಕರಣದ ಆರೋಪಿಗಳು.



ಪ್ರಕರಣದ ಹಿನ್ನೆಲೆ:

2015ರ ಏಪ್ರಿಲ್ 18ರಂದು ಶೃಂಗೇರಿ ತಾಲೂಕಿನ ಮೆಣಸೇ ಗ್ರಾಮ ವಾಸಿ, ಶೃಂಗೇರಿಯಲ್ಲಿ ಎಸ್ ಟಿಡಿ ಬೂತ್ ನಡೆಸುತ್ತಿದ್ದ ಗಣೇಶ್ ಅಲಿಯಾಸ್ ಗಣಿ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿ ಆಸಿಡ್ ಹಾಕುವ ಮೂಲಕ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿತ್ತು.ಆರೋಪಿ ಗಣೇಶ್ ಹಾಗೂ ಸಂತ್ರಸ್ಥ ಮಹಿಳೆ ಒಂದೇ ಊರಿನವರಾಗಿದ್ದು ಸ್ನೇಹಿತರಾಗಿದ್ದರು.ಗಣೇಶ್ ತನ್ನನ್ನು ಮದುವೆಯಾಗುವಂತೆ ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದಿದ್ದನು.ಆದರೆ ಮಹಿಳೆ ಮದುವೆಗೆ ತಿರಸ್ಕರಿಸಿದ್ದರು.ಈ ಕಾರಣಕ್ಕೆ ಗಣೇಶ್ ಮೂವರೊಂದಿಗೆ ಸೇರಿ ಆಸಿಡ್ ದಾಳಿ ಸಂಚು ರೂಪಿಸಿದ ಎಂದು ಇವರ ಮೇಲೆ ಆರೋಪಿಸಲಾಗಿತ್ತು.ಶೃಂಗೇರಿಯಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು.

ಅಂದು ರಾತ್ರಿ ಸುಮಾರು 8.45ರ ಸಮಯ ದ್ವಿಚಕ್ರವಾಹನದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ಆರೋಪಿಗಳು ವಿಳಾಸ ಕೇಳುವ ಸೋಗಿನಲ್ಲಿ ಮಹಿಳೆಯನ್ನು ಮಾತನಾಡಿಸಿ ಆಸಿಡ್ ಎರಚಿದರು ಎಂದು ಆರೋಪಿಸಲಾಗಿತ್ತು. ದಾಳಿಯಲ್ಲಿ ಬಲಗಣ್ಣು ಸುಟ್ಟು ಎಡಗಣ್ಣು ಭಾಗಶಃ ಹಾನಿಯಾಗಿತ್ತು ಮತ್ತು ಮೈ ಕೈ ಕಾಲು ಸಹ ಸುಟ್ಟಿತ್ತು. ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ಸುಧೀರ್ ಕುಮಾರ್ ಹೆಗಡೆ ಅವರು ಪ್ರಕರಣದ ತನಿಖೆ ನಡೆಸಿ ಕೋರ್ಟಿಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಈ ಕೇಸ್ ನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಬಿ.ಎಸ್.ಮಮತಾ ಕಾರ್ಯ ನಿರ್ವಹಿಸಿದ್ದರು.