ತೀರ್ಥಹಳ್ಳಿ: ಕೊರೋನ ಲಸಿಕೆಯ ವಿಚಾರವಾಗಿ ಸಂಘ ಪರಿವಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಿನ್ನೆ ರಾತ್ರಿ ಮಾರಾಮಾರಿ ನಡೆದಿದೆ. ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್ ನ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಮಧ್ಯದಲ್ಲಿ ಧಾವಿಸಿದ್ದಾರೆ. ಈ ಕುರಿತು ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಷ್ಪಕ್ಷಪಾತಾವಾಗಿ ನ್ಯಾಯಯುತ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ:
ತೀರ್ಥಹಳ್ಳಿಯ ಸೀಬಿನಕೆರೆ ಶಾಲೆಯಲ್ಲಿ ಎಂದಿನಂತೆ ಕೊರೋನ ಲಸಿಕೆ ಹಾಕಲಾಗುತ್ತಿತ್ತು , ಈ ಮಧ್ಯೆ ಲಸಿಕೆ ಹಾಕುವ ಸಂದರ್ಭದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದ್ದು ನಂತರದಲ್ಲಿ ಇದು ಘರ್ಷಣೆಗೆ ತಿರುಗಿದೆ, ಈ ಸಂದರ್ಭದಲ್ಲಿ ವಿಶ್ವನಾಥ್ ಗಾಣಿಗ ಮತ್ತು ನಮ್ಮತ್ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು, ಕೆಲವು ಗಂಟೆಗಳ ನಂತರ ಮುಖ್ಯ ಬಸ್ ನಿಲ್ದಾಣದ ಹೋಟೆಲ್ ಬಳಿಯಲ್ಲಿ ಪುನಃ ಗಲಾಟೆ ನಡೆದು ಬಿಜೆಪಿ ಕಾರ್ಯಕರ್ತ ಯಶಸ್ವೀ ಕಡ್ತೂರ್, ಹಾಗೂ ಕಾಂಗ್ರೆಸ್ ನ ಸುಭಾಷ್ ಕುಲಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಗಾಗಲೇ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರುಗಳು ಆಸ್ಪತ್ರೆಯ ಮುಂದೆ ಜಮಾವಣೆ ಆಗಿದ್ದರು.
ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಅವರು ಅಸ್ಪತೆಗೆ ಭೇಟಿ ನೀಡಿ ತಮ್ಮ ಕಾರ್ಯಕರ್ತರ ಆರೋಗ್ಯದ ಬಗ್ಗೆ ವಿಚಾರಿಸಿದರು. ನಂತರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಗಾಂಧಿ ಚೌಕದ ವರೆಗೆ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಮುಗಿಯುತ್ತಿದ್ದಂತೆ ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ಅವರ ನೇತೃತ್ವದ ತಂಡದಿಂದ ಬಿಜೆಪಿಯ ಪ್ರತಿಭಟನೆ ನಡೆಯಿತು.
ಮಧ್ಯ ರಾತ್ರಿವರೆಗೂ ಹಲವು ಬೆಳವಣಿಗೆ ಕಂಡು ಈ ಮಧ್ಯೆ ಪ್ರವೇಶಿಸಿದ ಡಿ.ವೈ.ಎಸ್.ಪಿ ಶಾಂತವೀರಪ್ಪ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಪ್ರತಿಭಟನೆ ನಿಲ್ಲಿಸುವಂತೆ ತಿಳಿಸಿದರು ಹಾಗೂ ಊರಿನ ಶಾಂತಿಗೆ ಧಕ್ಕೆ ಉಂಟಾಗದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ಸೂಚಿಸಿದರು.



0 Comments