ಕೊರೋನಾ ಲಾಕ್ ಡೌನ್ ತೆರವುಗೊಂಡ ಬೆನ್ನಲ್ಲೇ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿಗರ ಮೋಜು ಮಸ್ತಿಯಲ್ಲಿ ತೊಡಗಿರುವುದು ಈಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಚಾರ್ಮಾಡಿ ಘಾಟ್ ಬಳಿ ಒಂದೆಡೆ ದಟ್ಟ ಮಂಜಿನ ನಡುವೆ ತೆರಳಲು ವಾಹನ ಸವಾರರು ಹರಸಾಹಸ ಪಡುತ್ತಿದ್ದರೆ ಇನ್ನೊಂದೆಡೆ ವಾಹನಗಳನ್ನು ರಸ್ತೆ ಮಧ್ಯೆದಲ್ಲಿಯೇ ನಿಲ್ಲಿಸಿಕೊಂಡು ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ತೂಫಾನ್ ನಲ್ಲಿ ಬಂದ ಕೆಲ ಯುವಕರ ಗುಂಪೊಂದು ಸುಮಾರು 10-15 ನಿಮಿಷಗಳ ಕಾಲ ರಸ್ತೆ ಮಧ್ಯೆಯೇ ವಾಹನ ನಿಲ್ಲಿಸಿಕೊಂಡು ಡಾನ್ಸ್ ಮಾಡಿರುವ ವೀಡಿಯೋವೊಂದು ವೈರಲ್ ಆಗಿದೆ. ಇದರಿಂದ ವಾಹನ ಸಂಚಾರಕ್ಕೆ ಬಾರೀ ಅಡಚಣೆ ಉಂಟಾಗಿದೆ. ಜಲಪಾತದ ಸಮೀಪ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಬಂಡೆ ಮೇಲೆ ಹತ್ತಿ ಮಾಸ್ಕ್ ಕೂಡ ಧರಿಸದೆ ಸೆಲ್ಫಿ ತೆಗೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಿಯಮದ ಪ್ರಕಾರ ಚಾರ್ಮಾಡಿ ಘಾಟ್ ಬಳಿ ವಾಹನಗಳನ್ನು ನಿಲ್ಲಿಸುವಂತಿಲ್ಲ, ಪ್ರವಾಸಿಗರು ನಿಯಮಗಳನ್ನು ಗಾಳಿಗೆ ತೂರಿ ಮೋಜು ಮಸ್ತಿಯಲ್ಲಿ ತೊಡಗಿದ್ದರೂ ಪೊಲೀಸರು ಮಾತ್ರ ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಇನ್ನೂ ಕೊರೋನಾ ಪೂರ್ಣವಾಗಿ ಹತೋಟಿಗೆ ಬಂದಿಲ್ಲ ಆಗಲೇ ಪ್ರವಾಸಿಗರು ಸಾಮಾಜಿಕ ಅಂತರ ಮರೆತು ಕನಿಷ್ಠ ಮಾಸ್ಕ್ ಕೂಡ ಧರಿಸದೆ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದರಿಂದ ಇತರೆ ವಾಹನ ಸವಾರರಿಗೂ ಅಡಚಣೆ ಉಂಟಾಗುತ್ತಿದೆ. ಪೊಲೀಸರು ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು. - ಹೆಸರು ಹೇಳಲಿಚ್ಚಿಸದ ಸ್ಥಳೀಯ

 

ಇತ್ತೀಚಿನ ದಿನದಲ್ಲಿ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದ್ದು, ಕೆಲ ಪ್ರವಾಸಿಗರು ಚಾರ್ಮಾಡಿ ಘಾಟ್ ನಲ್ಲಿ ಮೋಜು ಮಸ್ತಿ ಮಾಡುತ್ತಾ ಇತರೆ ವಾಹನಗಳಿಗೂ ಅಡಚಣೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಂದಿನ ದಿನದಲ್ಲಿ ಯಾರೇ ನಿಯಮ ಉಲ್ಲಂಘನೆ ಮಾಡಿದರೂ ಅವರಿಗೆ ದಂಡ ವಿಧಿಸಲಾಗುತ್ತದೆ. - ಸತೀಶ್, ಸಬ್ ಇನ್ಸ್ಪೆಕ್ಟರ್, ಬಣಕಲ್ ಪೊಲೀಸ್ ಠಾಣೆ

ಚಾರ್ಮಾಡಿ ಘಾಟ್ ನಲ್ಲಿ ಮೋಜುಮಸ್ತಿ ಮಾಡುತ್ತಿದ್ದು ಗಮನಕ್ಕೆ ಬಂದಿದೆ. ಅಂತಹ ಘಟನೆಗಳು ಮರು ಕಂಡು ಬಂದಲ್ಲಿ ಮುಲಾಜಿಲ್ಲದೆ ಅವರ ಮೇಲೆ ಕೇಸ್ ದಾಖಲೆ ಮಾಡಿ ಎಂದು ಬಣಕಲ್ ಪೊಲೀಸ್ ಠಾಣೆಗೆ ತಿಳಿಸಿದ್ದೇನೆ. ಹಾಗೂ ಪ್ರವಾಸ ಕೇಂದ್ರಗಳಿಗೆ ಪ್ರವಾಸಿಗರು ಹೆಚ್ಚಾಗುತ್ತಿದ್ದು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಬೇಕು ಜೊತೆಗೆ ಯಾವುದೇ ಅಹಿತಕರ ಚಟುವಟಿಕೆ  ನಡೆಯದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ PDO ಗಳಿಗೆ ಜಿಲ್ಲಾಧಿಕಾರಿ ಗಳ ಆದೇಶದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ನೋಟಿಸ್ ಜಾರಿಗೆ ಮಾಡಿದ್ದೇನೆ. - ನಾಗರಾಜ್ ಮೂಡಿಗೆರೆ ತಹಶೀಲ್ದಾರ್

  ವರದಿ : ತನು ಕೊಟ್ಟಿಗೆಹಾರ