ಕಳಸ ತಾಲೂಕಿನ ಬಾಳೆಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರ್ಕಾರದ ಸುಪರ್ದಿಗೆ ಯಾವುದೇ ಕಾರಣಕ್ಕೂ ನೀಡ ಬಾರದು ಎಂದು ಆಗ್ರಹಿಸಿ, ಬಾಳೆಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಕಳಸ ತಾಲೂಕಿನ  ಬಾಳೆ ಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು  ಮಾರ್ಚ್ 2019 ರಿಂದ ಬೆಳಗಾವಿ ಮೂಲದ ದಾನೇಶ್ವರಿ ಟ್ರಸ್ಟ್  ನಿರ್ವಹಣೆ ಮಾಡುತ್ತಾ ಬಂದಿದ್ದು, ಸರ್ಕಾರ ತನ್ನ ಸುಪರ್ದಿಗೆ ಪಡೆದು ಕೊಳ್ಳುತ್ತಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಕೊರೋನ ಸಮಯದಲ್ಲಿ  ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಉತ್ತಮ ಗುಣಮಟ್ಟದ  ಚಿಕಿತ್ಸೆ ಈ ಪ್ರಾಥಮಿಕ ಚಿಕಿತ್ಸಾ ಕೇಂದ್ರದಿಂದ ಲಭ್ಯವಾಗಿತ್ತು.

ಸರ್ಕಾರವು ಸಿಬ್ಬಂದಿಗಳಿಗೆ ಐದು ತಿಂಗಳಿನ ಸಂಬಳವನ್ನು ನೀಡದೇ, ಆಸ್ಪತ್ರೆಯನ್ನು  ತನ್ನ ಹಿಡಿತಕ್ಕೆ ತೆಗೆದು ಕೊಳ್ಳುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟು ದಿನಗಳ ಕಾಲ ಉತ್ತಮವಾದ ವೈದ್ಯಕೀಯ ಸೌಲಭ್ಯವನ್ನು ಪಡೆದಿದ್ದೇವೆ,ಮುಂದೇನು ಎಂಬ ಆತಂಕ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದರು.