ಮಲೆನಾಡಿನ ಭಾಗದಲ್ಲಿ ಹೆಚ್ಚಾಗಿ ಅಕೇಶಿಯಾ, ನೀಲಗಿರಿ ಮರಗಳು ರಾರಾಜಿಸುತ್ತಿವೆ, ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ದಟ್ಟ ಕಾಡು ಆವರಿಸಿದ್ದರೂ ಸಹ ಪ್ರಾಣಿ ಪಕ್ಷಿಗಳಿಗೆ ಆಹಾರ ಅಥವಾ ನೆರಳಿಗೆ ಈ ಮರಗಳು ಉಪಯುಕ್ತವಾಗಿಲ್ಲ ಕಾರಣ ಈ ಮರಗಳಿಂದ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಮತ್ತು ಆಹಾರ ಎರಡಕ್ಕೂ ಸಮಸ್ಯೆ ಉಂಟಾಗುತ್ತಿದೆ, ಅಹಾರವನ್ನರಸಿ ಪ್ರಾಣಿಗಳು ಪಟ್ಟಣಕ್ಕೆ ಬರುತ್ತಿವೆ, ಈ ಹಿನ್ನೆಲೆ ಮಲೆನಾಡಿನ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕೆಂಬ ಯೋಜನೇ ಬಂದಿತು. ಆದ ಕಾರಣ ಹಣ್ಣು ಬಿಡುವ ಮರಗಳನ್ನು ನೆಡುವ ಕಾಯಕಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಹೆಜ್ಜೆ ಇಟ್ಟಿದ್ದು, ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ಆರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಬಣಕಲ್ ಸಮೀಪದ ಮತ್ತಿಗಟ್ಟೆಯಲ್ಲಿ ಹೆಚ್ಚಾಗಿ ಬೆಳೆದಿರುವ ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ಕಡಿದು ಸುಮಾರು 2800 ಹಣ್ಣಿನ ಗಿಡಗಳನ್ನು ನೆಡಲಾಗಿದೆ.
ಫ್ರೂಟ್ ಫಾರೆಸ್ಟ್ ಎಂಬ ಚಿಕ್ಕಮಗಳೂರಿನ ಅರಣ್ಯ ಇಲಾಖೆಯ ಈ ಹೊಸ ಯೋಜನೆಗೆ ಡಾ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡುವ ಮೂಲಕ ಫ್ರೂಟ್ ಫಾರೆಸ್ಟ್ ಗೆ ಆರಂಭ ದೊರಕಿದೆ, ಹಲವಾರು ಜಾತಿಯ ಹಣ್ಣು ಬಿಡುವ ಗಿಡಗಳನ್ನು ಸುಮಾರು 6 ಹೆಕ್ಟೇರ್ ಪ್ರದೇಶದಲ್ಲಿ ನೆಡಲಾಗಿದ್ದು ಇದರಲ್ಲಿ ಹೆಬ್ಬಲಸು, ಮಾವು, ನೇರಳೆ, ಹಲಸು ಸೇರಿದಂತೆ ಹಲವಾರು ಬಗೆಯ ಕಾಡು ಜಾತಿಯ ಹಣ್ಣು ಬಿಡುವ ಗಿಡಗಳನ್ನು ಸಹ ನೆಡಲಾಗಿದೆ. ಈ ಕಾಯಕಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ 150 ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಗುಂಪು ಸಾಥ್ ನೀಡಿದೆ. ಕಾಡಿನ ನಾಶ ಮಾಡದೆ ಪ್ರಕೃತಿಯನ್ನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ.



0 Comments