ಶಿವಮೊಗ್ಗ : ಇಲ್ಲೊಬ್ಬ ಭೂಪ, ಮಾಡಿದ ಸಾಲ ತೀರಿಸಲು ಕಳ್ಳತನ ಮಾಡಿ, ಸಾಲ ತೀರಿಸಿ ನಂತರದಲ್ಲಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ  ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಸೊರಬ ತಾಲೂಕಿನ ಚಂದ್ರಪ್ಪ ಗಣೇಶಪ್ಪ ಎಂಬ 30 ವರ್ಷದ ವ್ಯಕ್ತಿಯೊಬ್ಬ ಸ್ವಸಹಾಯ ಸಂಘದಲ್ಲಿ ಸುಮಾರು ಅರವತ್ತು ಸಾವಿರ ರೂ ಸಾಲ ಮಾಡಿದ್ದ. ಆ ಸಾಲದ ಮೊತ್ತವನ್ನು ತೀರಿಸಲು ನೆರೆಯ ಗ್ರಾಮದ ಒಂದು ಮನೆಗೆ ಹೊಂಚು ಹಾಕಿ  ಯಾರೂ ಇಲ್ಲದಿದನ್ನು ಸ್ಪಷ್ಟಪಡಿಸಿಕೊಂಡು ಮನೆಯ ಬೀಗ ಒಡೆದು ಮನೆಯಲ್ಲಿದ್ದ ಚೈನ್, ಉಂಗುರ, ಹಾಗೂ ಒಂದು ಚಿನ್ನದ ಓಲೆ ಕಳ್ಳತನ ಮಾಡಿದ್ದ. ಈ ಹಿನ್ನೆಲೆಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಆಗ ಒಂದೇ ಬಾರಿಗೆ ಈ ಚಂದ್ರಪ್ಪ ಸ್ವಸಹಾಯ ಸಂಘದ ಸಾಲ ಮರುಪಾವತಿ ಮಾಡಿದ್ದು ಬೆಳಕಿಗೆ ಬಂದಿದೆ, ಈ ಚಟುವಟಿಕೆಯನ್ನು ಆಧರಿಸಿ ಚಂದ್ರಪ್ಪ  ಗಣೇಶಪ್ಪನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿದ್ದೇನೆಂದು ಪೊಲೀಸರ ಬಳಿ ಚಂದ್ರಪ್ಪ  ಬಾಯ್ಬಿಟ್ಟಿದ್ದಾನೆ.

ಆರೋಪಿಯ ಬಳಿ ಇದ್ದ ಚಿನ್ನಾಭರಣವನ್ನು  ಡಿ ವೈ ಎಸ್ ಪಿ ಶಿವಾನಂದ ಮದರಕಂಡಿ, ಅವರ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ಹೆಚ್ಚಿನ ತನಿಖೆಗಾಗಿ ಈಗಾಗಲೇ ಆದೇಶ ಹೊರಡಿಸಲಾಗಿದೆ.