ಪ್ರಮಾಣಿಕತೆಯ ಹಣೆಪಟ್ಟಿ ಹೊತ್ತಿದ್ದ, ಶೃಂಗೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರಿಂದಲೂ ಒಂದು ರೂಪಾಯಿಯನ್ನೂ ಲಂಚ ಪಡೆಯದ ಶೃಂಗೇರಿ ಉಪನೋಂದಣಾಧಿಕಾರಿ ಚೆಲುವರಾಜ್ ಅವರನ್ನು ಹಳೆಯ ಭ್ರಷ್ಟಾಚಾರ ಕೇಸೊಂದರ ಆದೇಶದ ಮೇರೆಗೆ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಏನಿದು ಪ್ರಕರಣ?
ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಡ್ಯದ 1ನೇ ಹೆಚ್ಚುವರಿ ಸಿವಿಲ್, ಜೆಎಂಎಫ್‌ಸಿ ನ್ಯಾಯಾಧೀಶರು ನಾಲ್ವರು ಉಪ ನೋಂದಣಾಧಿಕಾರಿಗಳಿಗೆ ತಲಾ 4 ವರ್ಷ, ಮೂವರು ಪತ್ರ ಬರಹಗಾರರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 1.25 ಕೋಟಿ ದಂಡ ವಿಧಿಸಿ ಈ ಹಿಂದೆ ತೀರ್ಪು ನೀಡಿತ್ತು.
2006ಕ್ಕೂ ಹಿಂದೆ ನಗರದ ಉಪ ನೋಂದವಣಾಧಿಕಾರಿ ಕಚೇರಿಯಲ್ಲಿ ಉಪ ನೋಂದಾವಣಾಧಿಕಾರಿಗಳಾಗಿದ್ದ ಎಸ್.ಎನ್.ಪ್ರಭಾ, ಚಲುವರಾಜು, ಪ್ರಭಾರ ಉಪ ನೋಂದಣಾಧಿಕಾರಿಗಳಾಗಿದ್ದ ಲೀಲಾವತಿ, ಸುನಂದಾ ಹಾಗೂ ಪತ್ರ ಬರಹಗಾರರಾಗಿದ್ದ ಬಿ.ಕೆ.ರಾಮರಾವ್, ನರಸಿಂಹಮೂರ್ತಿ, ಚಂದ್ರಶೇಖರ್ ಶಿಕ್ಷೆಗೆ ಒಳಗಾಗಿದ್ದರು.
ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ 2006ರಲ್ಲಿ ಉಪ ನೋಂದಣಾಧಿಕಾರಿಯಾಗಿದ್ದ ನರಸಿಂಹಯ್ಯ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಮೇಶ್ ಎಸ್ ಗಾಣಿಗೇರ್ ತೀರ್ಪು ನೀಡಿದ್ದರು.
ಎಸ್.ಎನ್.ಪ್ರಭಾ ಸದ್ಯ ಬೆಂಗಳೂರು ಐಜಿಆರ್ (ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್) ಕಛೇರಿಯಲ್ಲಿದ್ದರೆ. ಚೆಲುವರಾಜು ಶೃಂಗೇರಿ ಉಪ ನೋಂದಣಾಧಿಕಾರಿ ಆಗಿದ್ದರು. ಲೀಲಾವತಿ ಮದ್ದೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ, ಸುನಂದಾ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸರ್ಕಾರಿ ಅಭಿಯೋಜಕ ಎಂ. ಜಿ ಸುರೇಶ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಇದೀಗ ತಕ್ಷಣವೇ ಜಾರಿಗೆ ಬರುವಂತೆ ಶೃಂಗೇರಿ ಉಪನೋಂದಣಾ ಅಧಿಕಾರಿ ಚೆಲುವರಾಜ್ ಸೇರಿ ಒಟ್ಟು 8 ನೌಕರರನ್ನು ಸೇವೆಯಿಂದ ವಜಾಗೊಳಿಸಿ ಭಾ.ಆ.ಸೇ ಶಿಸ್ತು ಪ್ರಾಧಿಕಾರ ಹಾಗೂ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಕೆ.ಪಿ ಮೋಹನ್ ರಾಜ್ ಅವರು ಆದೇಶ ಹೊರಡಿಸಿದ್ದಾರೆ.
ದುಖಃವಿಲ್ಲ, ಖುಷಿಯಿಂದಲೇ ತೆರಳುತ್ತೇನೆ ಎಂದ ಚೆಲುವರಾಜ್
ಈ ಕುರಿತು ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿದ ಉಪನೋಂದಣಾ ಅಧಿಕಾರಿ ಚೆಲುವರಾಜ್, ಇದುವರೆಗೂ ನನಗೆ ಯಾವುದೇ ಆದೇಶದ ಕುರಿತು ಮಾಹಿತಿ ಇರುವುದಿಲ್ಲ. ಹಾಗೆ ಆದೇಶವಾಗಿದ್ದಲ್ಲಿ ನನಗೇನೂ ದುಖಃವಿಲ್ಲ.
2006ರಲ್ಲಿ ನಾನೇ ದೂರು ನೀಡಿದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿತ್ತು, ಈ ಬಗ್ಗೆ ಕೋರ್ಟ್ ತಡೆಯಾಜ್ಞೆ ಸಹ ನೀಡಿದ್ದು. ಆದರೆ ಕೆಲವು ದಿಢೀರ್ ಬೆಳವಣಿಗೆಗಳ ಹಿಂದೆ ರಾಜಕೀಯ ಒತ್ತಡ ಕೆಲಸ ಮಾಡಿರಲೂಬಹುದು. ನಾನು ಕೆಲಸ ಮಾಡಿದಷ್ಟು ದಿನ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ, ಕರ್ತವ್ಯದಿಂದ ಬಿಡುಗಡೆ ನೀಡಿದಲ್ಲಿ ಖುಷಿಯಿಂದಲೇ ತೆರಳುತ್ತೇನೆ ಎಂದರು.





0 Comments