ಮಲೆನಾಡಿನ ಒಂದಿಷ್ಟು ಭಾಗಗಳಲ್ಲಿ ದಿನೇ ದಿನೇ ಪ್ರಾಣಿಗಳ ಉಪಟಳ ಒಂದೆಡೆಯಾದರೆ, ಎಗ್ಗಿಲ್ಲದೆ ಅಕ್ರಮವಾಗಿ ಮೂಕ ಪ್ರಾಣಿಗಳನ್ನು ಸಾಗಿಸುವ ಹೀನಕೃತ್ಯ ಇನ್ನೊಂದೆಡೆ. ಈ ರೀತಿಯ ಘಟನೆಗೆ ಮತ್ತೊಮ್ಮೆ ಸಾಕ್ಷಿಯಾಗಿದೆ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್.

ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುವುದು ಹೊಸತೇನಲ್ಲ, ಮಲೆನಾಡಿನ ಭಾಗಗಳಲ್ಲಂತೂ ವಿಪರೀತವಾಗಿ, ಯಾರ ಭಯವೂ ಇಲ್ಲದೆ ಈ ದುಷ್ಕೃತ್ಯ ನಡೆಯುತ್ತಲೇ ಇದೆ.

ಇಂದು ಬೆಳಗ್ಗೆ 8 ಗಂಟೆಗೆ ಎರಡು ಕೋಣಗಳನ್ನು ಕ್ರೂರವಾದ ರೀತಿಯಲ್ಲಿ,  ವಿಕೃತವಾಗಿ ಸಾಗಿಸುತ್ತಿದ್ದ ಘಟನೆ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಕಂಡುಬಂದಿದೆ. ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ಧರ್ಮಸ್ಥಳ ಪಿಎಸ್ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಎಂದಿನಂತೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಮಹಿಂದ್ರ ಜೀತೋ ವಾಹನವು ದಾಖಲೆಗಳಿಲ್ಲದೆ ಎರಡು ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಕೊಂಡು ಬರುತ್ತಿತ್ತು ಚಾಲಕನಾಗಿ ಶಿವಣ್ಣ ಮತ್ತು ಅವನ ಜೊತೆ ಸೋಮಣ್ಣ ಎಂಬ ವ್ಯಕ್ತಿ ಇಬ್ಬರು ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಕೋಣಗಳನ್ನು ಸಾಗಾಟ ಮಾಡಿ ಆ ಮೂಕ ಜೀವಿಗಳನ್ನು ಕೊಂದು ಅದರ ಮಾಂಸವನ್ನು ಮಾರಿ ಹಣ ಸಂಪಾದನೆ ಮಾಡುವುದು ಇವರ ಗುರಿಯಾಗಿತ್ತು ಎಂದು ಪಿಎಸ್ಐ ಚಂದ್ರಶೇಖರ್ ಅವರು ಮಾಡಿದ ತನಿಖೆಯಲ್ಲಿ ತಿಳಿದುಬಂದಿದೆ.  ಈ ಇಬ್ಬರೂ ಆರೋಪಿಗಳು, ಹಾಗೂ ಮಹಿಂದ್ರ ಜೀತೋ ವಾಹನವನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರ ಹಿಂದೆ ಇರುವ ಕಾಣದ ಕೈಗಳಿಗೆ ಆದಷ್ಟು ಬೇಗ ಬಲೆಗೆ ಬೀಳಿಸಿಕೊಳ್ಳುವ ಸಲುವಾಗಿ ಮುಂದಿನ ತನಿಖೆ ಚುರುಕಾಗಿ ಸಾಗುತ್ತಿದೆ.

ಈವರೆಗೆ ಎಗ್ಗಿಲ್ಲದೆ ಸುಮಾರು ಏಳಕ್ಕೂ ಹೆಚ್ಚು ಅಕ್ರಮ ಗೋಸಾಗಾಟ ನಡೆದಿದ್ದು ಇದೆಲ್ಲದರ ಹಿಂದೆ ಹಣ ಮಾಡುವ ಉದ್ದೇಶದಿಂದ ಒಬ್ಬ ಮುಖ್ಯವಾದ ಕಿಂಗ್ ಪಿನ್  ಇರುವುದು ಕಂಡುಬಂದಿದೆ ಆದಷ್ಟು ಬೇಗ ಆತನನ್ನು ವಶಪಡಿಸಿಕೊಳ್ಳುವ ವಿಶ್ವಾಸ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.