ಬೆಲೆ ಏರಿಕೆ ವಿರೋಧಿಸಿ ಇಂದು ಶೃಂಗೇರಿ ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿತ್ತು.

ಶೃಂಗೇರಿ ಬಸ್ ನಿಲ್ದಾಣದಿಂದ ಮಾರ್ಕೆಟ್ ರಸ್ತೆ ವರೆಗೆ ಸೈಕಲ್ ಜಾಥಾ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಭಾಗಿಯಾದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಅಂಶುಮಾನ್,ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲ ಹೊಂದಿವೆ.ಇದರಿಂದ ಜನಸಾಮಾನ್ಯರ ಬದುಕು ಕಷ್ಟಕ್ಕೆ ಸಿಲುಕಿದೆ.

ಜನರು ಜೀವ ಉಳಿಸಿಕೊಳ್ಳಲು ಹೋರಾಡುವ ಸಂದರ್ಭದಲ್ಲಿ ಬೆಲೆ ಏರಿಕೆ ಮೂಲಕ ಜೀವನವನ್ನೇ ನಾಶ ಮಾಡುತ್ತಿದೆ.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡವರ ವಿರೋಧಿ,ಯುವಕರ ವಿರೋಧಿ,ವಿದ್ಯಾರ್ಥಿಗಳ ವಿರೋಧಿ,ಮಹಿಳೆಯರ ವಿರೋಧಿ ಹಾಗೂ ಕೂಲಿ ಕಾರ್ಮಿಕರ ವಿರೋಧಿ ಸರ್ಕಾರವಾಗಿದೆ.

ಈ ಕೂಡಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು.ಜನರ ಧ್ವನಿಯಾಗಿ ಕಾಂಗ್ರೆಸ್ ನಿರಂತರವಾಗಿ ಜನಪರ ಹೋರಾಟ ಮಾಡುತ್ತಿದೆ.

ಇಂದು ಮಾಡಿರುವುದು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸಾಂಕೇತಿಕ ಹೋರಾಟ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಹತ್ತಿರ ತೆರಳಿ ಮನೆ ಮನ ಮುಟ್ಟುವಂತೆ ಹೊರಾಟ ಮಾಡುವ ಮೂಲಕ ಇನ್ನೂ ಮುಂದುವರೆಸೋಣ ಎಂದರು.

ಪ್ರತಿಭಟನೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಮುರೊಳ್ಳಿ ಹಾಗೂ ಇತರೆ ಕಾಂಗ್ರೆಸ್ ಮುಖಂಡರು ಇದ್ದರು.