ಕಡೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದ್ದು ಬಿಜೆಪಿ ಸರ್ಕಾರದ ಸಾಧನೆ ಎಂದು ಬೆಲೆ ಏರಿಕೆ ವಿರುದ್ಧ ಕಡೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಟೀಕಿಸಿದರು.
ತೈಲ ಬೆಲೆ ವಿಪರೀತ ಏರಿಕೆ ಕಂಡಿದ್ದು, ಇದರಿಂದ ಉಳಿದ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳಗೊಂಡು ಜನಸಾಮಾನ್ಯರು ಹೈರಾಣಾಗಿದ್ದಾರೆ.
ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನರು ಬದುಕದಂತಹ ಪರಿಸ್ಥಿತಿ ತಂದೊಡ್ಡಿರುವುದೇ ಬಿಜೆಪಿಯ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.ಈ ಜನವಿರೋಧಿ ನೀತಿಯನ್ನಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಮ್ಮ ಹೋರಾಟ ನಿರಂತರವಿರಲಿದೆ ಎಂದರು.
ಈ ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗ ಆಹಾರ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರ ಸಿಗುವಂತೆ ನೋಡಿಕೊಳ್ಳಲಾಗಿತ್ತು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಉದ್ಯೋಗ ಖಾತ್ರಿ ಯೋಜನೆ ಇಲ್ಲದಿದ್ದರೆ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಬಡವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಅಸಾಧ್ಯ ಎಂದರು. ಎಪಿಎಂಸಿ ಮೈದಾನದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ಆಟೊಗೆ ಹಗ್ಗ ಕಟ್ಟಿಕೊಂಡು ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ವಿರುದ್ಧ ಘೋಷಣೆ ಕೂಗುತ್ತ ಕಾಂಗ್ರೆಸ್ ಕಾರ್ಯಕರ್ತರು ಸಾಗಿದರು, ಅವರ ಹಿಂದೆ ಆರ್. ಧ್ರುವನಾರಾಯಣ್ ಎತ್ತನಗಾಡಿಯಲ್ಲಿ ತೆರಳಿದರು.
ಮಾಜಿ ಸಂಸದರಾದ ಜವರೇಗೌಡ, ಜಿಲ್ಲಾ ಕಾಂಗ್ರೆಸ್ ಅಧಕ್ಷ ಡಾ. ಅಂಶುಮಂತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಹಾಗೂ ಇತರರಿದ್ದರು.




0 Comments