SARFAESIS Act - Securitization and Reconstruction of Financial Assets and Enforcement of Security Interest.
ಈ ಕಾಯ್ದೆಯು, ಬ್ಯಾಂಕುಗಳಿಗೆ ಸುಸ್ತಿಯಾದ ಕೃಷಿ ಸಾಲವನ್ನು ನೋಟೀಸು ನೀಡಿದ ಅರವತ್ತು ದಿನಗಳ ಒಳಗಾಗಿ ನ್ಯಾಯಾಲಯವನ್ನು ಸಂಪರ್ಕಿಸದೆ ನೇರವಾಗಿ ಹರಾಜು ಹಾಕಿಕೊಂಡು ತಮ್ಮ ಸಾಲದ ಮೊತ್ತವನ್ನು ಮುರಿದುಕೊಳ್ಳಬಹುದು ಎಂಬ ಅಧಿಕಾರವನ್ನು ನೀಡುತ್ತದೆ.
ಯಾವುದೇ ಕೃಷಿಕನ ಸಾಲವು ಸುಸ್ತಿಯಾಗಿದೆ ಎಂದರೆ ಆತನು ಅಪರಾಧಿಯಲ್ಲ, ಬದಲಾಗಿ ಅಸಹಾಯಕ. ಹವಾಮಾನ ವೈಪರೀತ್ಯ, ಬೆಲೆ ನಷ್ಟದಿಂದಾಗಿ ಕೃಷಿ ಆರ್ಥಿಕತೆಯ ನಷ್ಟಕ್ಕೊಳಗಾಗಿ ಬ್ಯಾಂಕಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಇರುತ್ತಾನೆಯೇ ಹೊರತು, ಬ್ಯಾಂಕಿಗೆ ಮೋಸಮಾಡಬೇಕೆಂಬ ಉದ್ದೇಶವಿರುವುದಿಲ್ಲ. ಆದರೆ ಸಾಲ ಮರುಪಾವತಿ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ರೈತನಿಗೆ ನಿರೂಪಿಸಲು ಹಾಗೂ ನ್ಯಾಯಾಲಯಕ್ಕೆ ಮೊರೆಹೋಗುವ ಅವಕಾಶವನ್ನೇ ನೀಡದೇ ಏಕಾಏಕಿ ಹರಾಜು ನಡೆಸುವ ಅಧಿಕಾರವನ್ನು ಬ್ಯಾಂಕುಗಳಿಗೆ ನೀಡಿದರೆ ಅದು ಅಸಹಾಯಕ ರೈತನ ಅಂತ್ಯಕ್ಕೆ ಮುನ್ನುಡಿ ಬರೆದಂತೆ.
ಈ ಕಾಯ್ದೆಯ ವಿರುದ್ಧವಾಗಿ ತಮಿಳುನಾಡು ಹಾಗೂ ಕೇರಳ ಹೈಕೋರ್ಟ್ ಗಳು ತೀರ್ಪು ನೀಡಿ ರೈತರ ಹಿತ ಕಾಯ್ದಿವೆ. ಆದರೆ ಕರ್ನಾಟಕ ಹೈಕೋರ್ಟ್ ಕಾಯ್ದೆಯ ಪರವಾಗಿ ತೀರ್ಪು ನೀಡಿದೆ.
ವಾಣಿಜ್ಯ ಬೆಳೆಗಾರರ ಬದುಕು ಮೂರಾಬಟ್ಟೆಯಾಗದಂತೆ ತಡೆಯಲು ಚಿಕ್ಕಮಗಳೂರಿನ ಕೃಷಿಕ ಸಮುದಾಯವು ಪೋಸ್ಟ್ ಕಾರ್ಡ್ ಚಳುವಳಿಯನ್ನು ರೂಪಿಸುತ್ತಿದ್ದು,
ಈ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಕೃಷಿಯನ್ನು ಇದರಿಂದ ಹೊರತುಪಡಿಸಬೇಕೆಂದು ಒತ್ತಾಯಿಸಿ ಮಾನ್ಯ ಪ್ರಧಾನಮಂತ್ರಿಗಳನ್ನು ಹಾಗೂ ಮುಖ್ಯಮಂತ್ರಿಗಳನ್ನು ಈ ವಿಚಾರದ ಬಗ್ಗೆ ಗಮನ ಸಳೆಯಲು ಪೋಸ್ಟ್ ಕಾರ್ಡ್ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ.
ನಾಳೆಯಿಂದ ಇದೇ ತಿಂಗಳ 11ನೇ ತಾರೀಖಿನ ವರೆಗೆ ಈ ಅಭಿಯಾನವು ನಡೆಯಲಿದೆ.
ವಾಣಿಜ್ಯ ಬೆಳೆಗಳನ್ನು ಬೆಳೆಯುವ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತೀ ಹಳ್ಳಿಗಳ ರೈತರಿಂದ ಪೋಸ್ಟ್ ಕಾರ್ಡ್ ಗಳನ್ನು ಬರೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತದೆ.
2002ರಲ್ಲಿ ಜಾರಿಗೆ ಬಂದ ಈ ಕಾಯ್ದೆಯು ವಿಜಯ್ ಮಲ್ಯ ಹಾಗೂ ಹಲವು ಭ್ರಷ್ಟರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಹ ಸಹಕಾರಿಯಾಗಿತ್ತು.ಆದರೆ ಇದನ್ನ ಅಸ್ತ್ರವನ್ನಾಗಿ ಬಳಸಿಕೊಂಡು ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡದಿಂದ ಬ್ಯಾಂಕ್ ಗಳು ಸಣ್ಣ ಸಣ್ಣ ರೈತರ ಸಾಲಕ್ಕೆ ಸಹ ನೋಟಿಸ್ ನೀಡಿ ಮುಟ್ಟುಗೋಲು ಹಾಕಿಕೊಳ್ಳಲು ನೋಡುತ್ತಿವೆ.ಆದಕಾರಣ ಈ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಇದರಿಂದ ಕೃಷಿಯನ್ನು ಕೈ ಬಿಡಬೇಕು ಎಂಬುದು ರೈತವರ್ಗದ ಮನವಿ.



0 Comments