ಶೃಂಗೇರಿ ತಾಲೂಕಿನಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಯಾವುದೇ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡದೇ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದ ಉಪನೋಂದಣಾಧಿಕಾರಿಯಾದ ಚೆಲುವರಾಜು ಅವರನ್ನು ಸೇವೆಯಿಂದ ಅಮಾನತು ಮಾಡಬಾರದೆಂದು ವಿನಂತಿಸಿ ಯುವ ರೈತ ಸೇನೆ ಶೃಂಗೇರಿ ವತಿಯಿಂದ ತಹಸೀಲ್ದಾರ್ ರ ಮುಖಾಂತರ ಮನವಿ ಸಲ್ಲಿಸಿ ಕಂದಾಯ ಸಚಿವರಿಗೆ ಒತ್ತಾಯಿಸಲಾಯಿತು.

ಯುವ ರೈತ ವಿಘ್ನೇಶ್ ಉಳುವೆ ಮಾತನಾಡಿ ಚೆಲುವರಾಜ್ ಅವರು ಬಹಳ ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿದ್ದರು, ಒಂದೇ ಒಂದು ರೂಪಾಯಿ ಲಂಚ ಪಡೆಯದೆ ಎಲ್ಲರ ಕೆಲಸ ಮಾಡಿಕೊಡುತ್ತಿದ್ದರು. ಹಳ್ಳಿಗಳಿಂದ ಬಂದವರಿಗೆ ಪದೇ ಪದೇ ಬರಲು ತೊಂದರೆ ಆಗುತ್ತದೆ ಎಂದು ಸಂಜೆ ತಮ್ಮ ಕೆಲಸದ ವೇಳೆ ಮುಗಿದ ನಂತರವೂ ಕೆಲಸ ಮಾಡಿಕೊಡುತ್ತಿದ್ದರು.

ಇಂತಹ ವ್ಯಕ್ತಿಯನ್ನು ಅಮಾನತು ಮಾಡಿರುವುದು ಸರಿಯಲ್ಲ, ಅವರ ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಹಂಚಲಿ, ಶಿವಾನಂದ ಹೆಗ್ಗದ್ದೆ, ಭಾಸ್ಕರ್ ರಾವ್ ಸಿರಿಮನೆಯವರುಗಳು ಇದ್ದರು.