ಮಲೆನಾಡಿನ ಭಾಗಗಳಲ್ಲಿ ಕಾಡು ಪ್ರಾಣಿಗಳ ದಾಳಿ ದಿನೇದಿನೇ ಹೆಚ್ಚುತ್ತಿದ್ದು ಜನರು ಆತಂಕಕ್ಕೊಳಗಾಗುತ್ತಿದ್ದಾರೆ. ಮೂಡಿಗೆರೆ, ಕಳಸ, ಸಕಲೇಶಪುರ ಭಾಗದಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದರೆ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗಗಳಲ್ಲಿ ಚಿರತೆ, ಕರಡಿ ದಾಳಿಗಳಲ್ಲದೇ ಹೆಬ್ಬಾವು ಹಾಗೂ ಕಾಳಿಂಗ ಸರ್ಪ ಅತಿಯಾಗಿ ಕಂಡುಬರುತ್ತಿದೆ. ಇದು ಮನುಷ್ಯ ಹಾಗೂ ಪ್ರಕೃತಿಯ ನಡುವೆ ಸಮತೋಲನ ತಪ್ಪಿರುವ ಸೂಚನೆ ಎಂದರೂ ತಪ್ಪಾಗಲಾರದು.

ಮೊನ್ನೆಯಷ್ಟೇ ಶೃಂಗೇರಿಯಲ್ಲಿ ದಂಪತಿಗಳ ಮೇಲೆ ಕರಡಿ ದಾಳಿ ನಡೆಸಿತ್ತು, ತೀವ್ರವಾಗಿ ಗಾಯಗೊಂಡಿದ್ದ ದಂಪತಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ತಡರಾತ್ರಿ ಸುಮಾರು 12 ರಿಂದ 2.30ರ ಆಸುಪಾಸಿನ ಸಮಯದಲ್ಲಿ ಕೊಪ್ಪ ತಾಲೂಕಿನ ಕಡ್ತೂರಿನ ಹೊನಗಾರು  ಗ್ರಾಮದಲ್ಲಿ ರೈತರಾದ ಲಕ್ಷ್ಮಣ ಬಿನ್ ಸುಬ್ರಹ್ಮಣ್ಯ ಅವರ ಮನೆಯ ಕೊಟ್ಟಿಗೆಗೆ ನುಗ್ಗಿದ ಚಿರತೆಯೊಂದು ಹಸುವೊಂದನ್ನು ತಿಂದಿರುವ ಘಟನೆ ನಡೆದಿದೆ.

ಕತ್ತಲೆ ಸಮಯವಾದ್ದರಿಂದ ನಾಯಿಗಳು ಕೂಗಿವೆ ಆದರೆ ಯಾವುದೋ ಕಾಡುಪ್ರಾಣಿಗಳು ಕಂಡುಬಂದಿರಬಹುದು ಎಂದು ಮನೆಯವರು ಸುಮ್ಮನಾಗಿದ್ದೆವು, ಆದರೆ ಬೆಳಿಗ್ಗೆ 6ಗಂಟೆ ಸಮಯ ಎದ್ದು ನೋಡಿದಾಗ ಕೊಟ್ಟಿಗೆಯಲ್ಲಿದ್ದ ದನವು ಕಾಣೆಯಾಗಿರುತ್ತದೆ. ಸುತ್ತ ಮುತ್ತ ನೋಡಿದಾಗ ಅಲ್ಲಿಂದ ನೂರು ಅಡಿ ದೂರದಲ್ಲಿ ಅರ್ಧ ತಿಂದು ಬಿಟ್ಟ ದನದ ದೇಹ ಪತ್ತೆಯಾಯಿತು ಎಂದು ಲಕ್ಷ್ಮಣ್ ಅವರು ನ್ಯೂಸ್ ಮಲ್ನಾಡ್ ಗೆ ತಿಳಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ:

ಘಟನೆ ಬೆಳಕಿಗೆ ಬಂದ ಕೂಡಲೇ ಬೆಳಿಗ್ಗೆ 8ಕ್ಕೇ ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಸಹ ಇಂದು ಮದ್ಯಾಹ್ನದವರೆಗೂ ಯಾರೂ ಬರದೇ, ಮದ್ಯಾಹ್ನದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹುಲಿ ಎಂಬ ಅನುಮಾನ;

ಈ ನಡುವೆ ಗ್ರಾಮಸ್ಥರು ದಾಳಿ ಮಾಡಿರುವುದು ಚಿರತೆ ಅಲ್ಲ ಹುಲಿ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ, ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಶೃಂಗೇರಿ ತಾಲೂಕಿನ ತಾರೊಳ್ಳಿಕೊಡಿಗೆಯಲ್ಲಿ ಕರಡಿ ದಾಳಿ : ಇಬ್ಬರಿಗೆ ಗಾಯ ವೀಡಿಯೋ ನೋಡಿ (5, ಜುಲೈ 2021)