ಗೋವಿಗಾಗಿ ಒಂದು ಹೆಜ್ಜೆ ಅಭಿಯಾನದಡಿಯಲ್ಲಿ ದೇವಗೋಡು ಗ್ರಾಮದ ಕಾಮಧೇನು ಗೋಶಾಲೆಗೆ ಇಂದು ಬಾಳೆಹೊನ್ನೂರಿನ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸುಮಾರು 20 ಸಾವಿರ ಮೌಲ್ಯದ 15 ಚೀಲಗಳ ಹಿಂಡಿಯನ್ನು  ದಾನವಾಗಿ ನೀಡಿದ್ದಾರೆ.ನರಸಿಂಹರಾಜಪುರದ ಬಜರಂಗದಳದ ಸಂಚಾಲಕರಾದ ಸಂದೀಪ್ ಶೆಟ್ಟಿ ಹಾಗೂ ವಿಶ್ವಹಿಂದೂ ಪರಿಷತ್ ನ ರವಿ ಆಚಾರ್ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯಿತು.

ಈ ಕುರಿತು ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ರವಿ ಆಚಾರ್, ಗೋವಿನ ಉಳಿವಿಗಾಗಿ ಹಿಂದಿನಿಂದಲೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸತತವಾಗಿ ಸೇವಾಕಾರ್ಯವನ್ನು ನಡೆಸುತ್ತಲೇ ಬಂದಿದೆ ಹಾಗೆಯೇ ಮುಂದಿನ ದಿನಗಳಲ್ಲೂ ನಿರಂತರವಾಗಿ ಗೋವಿನ ಸಂರಕ್ಷಣೆಗೆ ಬೇಕಾದಂತಹ ಎಲ್ಲಾ ಕೆಲಸಗಳನ್ನು ಪರಿವಾರ ಮಾಡಲಿದೆ, ಹಾಗೂ ಗೋವಿಗಾಗಿ ಒಂದು ಹೆಜ್ಜೆ ಅಭಿಯಾನಕ್ಕೆ ಉತ್ತಮ ಬೆಂಬಲ ಎಲ್ಲೆಡೆ ದೊರೆತಿದೆ ಎಂದು ತಿಳಿಸಿದರು.

ಗೋವು ಭಾರತ ದೇಶದ ಅಸ್ಮಿತೆ. ವ್ಯವಸ್ಥಿತವಾಗಿ ಗೋವಿನ ಹತ್ಯೆಯನ್ನು ಮಾಡುವ ಕಸಾಯಿಖಾನೆಯ ಜಾಲವು ಎಗ್ಗಿಲ್ಲದೆ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಈ ಕುರಿತು ತೀವ್ರವಾದ ಹೋರಾಟವನ್ನು ನಡೆಸುವ ಸಂದರ್ಭ ಎದುರಾಗಿದೆ. ಮುಂದಿನ ದಿನಗಳಲ್ಲಿ ಗೋಮಾತೆಯ ರಕ್ಷಣೆಯನ್ನು ಜವಾಬ್ದಾರಿಯುತವಾಗಿ ಮಾಡುವ ಕೆಲಸ ಹಿಂದೂ ಸಮಾಜದ ಕರ್ತವ್ಯವಾಗಿದೆ ಎಂದು ಕಾಮಧೇನು ಗೋಶಾಲೆ ಮಾಲೀಕರಾದ ನಾಗೇಶ್ ಅಂಗೀರಸ ತಿಳಿಸಿದರು.

ಗೋವಿಗಾಗಿ ಒಂದು ಹೆಜ್ಜೆ ಅಡಿಯಲ್ಲಿ ಹಿಂಡಿಯನ್ನು ದಾನವಾಗಿ ನೀಡುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ಸುಜಿತ್, ಸಂಜಯ್, ಪ್ರದೀಪ್, ಕೌಶಿಕ್, ಅಭಿಷೇಕ್ ಇದ್ದರು. ಸುಮಾ ನಾಗೇಶ್ ಅವರು ನಿರೂಪಿಸಿ, ಕಿಗ್ಗ ಶ್ರೀನಿವಾಸ ಗೌಡ ವಂದಿಸಿದರು.