ಶೃಂಗೇರಿ ಕ್ಷೇತ್ರಕ್ಕೆ ಅನುದಾನ ಮಂಜೂರು ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ ಶುರುವಾಗಿದೆ. 

ಶಾಸಕ ರಾಜೇಗೌಡ ಅವರು ಯಾವುದೇ ರೀತಿಯ ಅನುದಾನವನ್ನು ಕ್ಷೇತ್ರಕ್ಕೆ ತರಲು ಪ್ರಯತ್ನಿಸಿಲ್ಲ. ಮಾಜಿ ಸಚಿವ ಡಿ.ಎನ್ ಜೀವರಾಜ್ ಅವರ ಶ್ರಮದಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬರುತ್ತಿದೆ.ಆರು ಕೋಟಿಗಳಷ್ಟು ಅನುದಾನವನ್ನು ಎಸ್ ಸಿ ಪಿ ಮತ್ತು ಎಸ್ ಟಿ ಪಿ ಅಡಿಯಲ್ಲಿ  ಕರ್ನಾಟಕ ಸರ್ಕಾರ ನೀರಾವರಿ ನಿಗಮವು ಬಿಡುಗಡೆ ಮಾಡಿದೆ.ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡಿದ ರಸ್ತೆಗೂ ಎರಡು ಕೋಟಿ ಅನುದಾನ ಇಡಲಾಗಿದೆ.

ಜೀವರಾಜ್, ಶೋಭಾ ಕರಂದ್ಲಾಜೆ ಅವರು ಅಭಿವೃದ್ದಿ ಕಾರ್ಯಗಳಿಗೆ ಹಣ ಬಿಡುಗಡೆಗೊಳಿಸಿಕೊಂಡು ಬಂದರೆ, ಇವರ ಬ್ಯಾನರ್ಗಳನ್ನು  ಹಾಕುತ್ತಾರೆ. ಇವರ ಅನುದಾನಗಳ ಪಟ್ಟಿಯನ್ನು ಅಥವಾ ವಿಶೇಷ ಕಾಮಗಾರಿಗಳಿದ್ದರೆ ತಿಳಿಸಲಿ ಎಂದು ಬಿಜೆಪಿ ಮುಖಂಡ ಸತೀಶ್ ಅದ್ದಡ ಆರೋಪಿಸಿದ್ದಾರೆ.

ಕಾಂಗ್ರೆಸ್ ಟಾಂಗ್: ಶಾಸಕ ರಾಜೇಗೌಡ ಅವರ ಜನಪ್ರಿಯತೆ ಸಹಿಸಲಾರದೆ, ಬಿಜೆಪಿಗರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಎಮ್ ಸತೀಶ್ ಆರೋಪಿಸಿದ್ದಾರೆ.

ಜೀವರಾಜ್ ಅವರು ತಮ್ಮ ಸ್ವಂತ ಪ್ರಯತ್ನದಿಂದ ಶೃಂಗೇರಿ ಕ್ಷೇತ್ರಕ್ಕೆ ಆರು ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿಯ ಮುಖಂಡರು ಎಲ್ಲೆಡೆ ಶುದ್ಧ ಸುಳ್ಳು ಹೇಳುತ್ತಿದ್ದಾರೆ, ಜನರ ದಾರಿ ತಪ್ಪಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ, ಎಂದು ಕಾಂಗ್ರೆಸ್ ಮುಖಂಡ ಸತೀಶ್ ಅವರು ಹೇಳಿದ್ದಾರೆ. 

ಶಾಸಕ ರೇಣುಕಾಚಾರ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಸಂದರ್ಭದಲ್ಲಿ ಅವರ ಕ್ಷೇತ್ರಕ್ಕೆ 520 ಕೋಟಿ ಹಣದ ವಿಶೇಷ ಪ್ಯಾಕೇಜ್ ತಂದಿದ್ದರು, ಈ ರೀತಿಯಾಗಿ ಜೀವರಾಜ್ ಅವರು ಏನಾದರೂ ಅನುದಾನವನ್ನು ತಂದಿದ್ದಾರೆಯೇ? ಎಂಬ ಪ್ರಶ್ನೆಯನ್ನು ಇಟ್ಟಿದ್ದಾರೆ. ಜೀವರಾಜ್ ಅವರು ಏನಾದರೂ ಆ ರೀತಿಯ ಪ್ಯಾಕೇಜ್ ತಂದಲ್ಲಿ ನಾವು ಅವರನ್ನು ಅಭಿನಂದಿಸುತ್ತೇವೆ ಎಂದಿದ್ದಾರೆ.