ನಿಡುವಾಳೆ ಗ್ರಾಮ ಪಂಚಾಯಿತಿಯ ಉತ್ತಮ  ಪ್ರಜಾಕೀಯ ಪಕ್ಷದ, ಬೆಂಬಲಿತ  ಚುನಾಯಿತ ಪ್ರತಿನಿಧಿಯಾದ ಸಚಿನ್ ಮರ್ಕಲ್ ಅವರಿಗೆ ಮೂಡಿಗೆರೆ ಕ್ಷೇತ್ರದ ಶಾಸಕರಾದ ಎಂಪಿ ಕುಮಾರಸ್ವಾಮಿಯವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ನ್ಯೂಸ್ ಮಲ್ನಾಡ್ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ಮರ್ಕಲ್ ಅವರನ್ನು ಸಂಪರ್ಕಿಸಿದಾಗ, ರಾತ್ರೋರಾತ್ರಿ ಪೊಲೀಸ್ ಸ್ಟೇಷನ್ ಗೆ ಕರೆಸಿ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದ ಅಭಿವೃದ್ಧಿ ಕುರಿತು ಪೋಸ್ಟ್ ಗಳನ್ನು ಡಿಲೀಟ್ ಮಾಡಿಸಿದ್ದಾರೆ, ಜನಸಾಮಾನ್ಯರಿಗೆ ನಾನು ಪ್ರಜಾಕೀಯ ಪಕ್ಷದ ಕುರಿತು ಹಾಗೂ ಪಕ್ಷದ ಧ್ಯೇಯದ ಕುರಿತು ಮಾಹಿತಿ ನೀಡುತ್ತಿದ್ದೆ, ಆದರೆ ಶಾಸಕ ಕುಮಾರಸ್ವಾಮಿಯವರು ಪದೇ ಪದೇ ನನ್ನಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ, ನನ್ನ ತಾಯಿಯವರು ಅಂಗನವಾಡಿಯ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ, ಅವರಿಗೂ ಕೂಡ ಅನವಶ್ಯಕವಾಗಿ ಒತ್ತಡ ಹೇರುತ್ತಿದ್ದಾರೆ. ಸರ್ಕಾರದಿಂದ ಬಂದ ಶಾಸಕರ ಅನುದಾನದ ಕೋಟಿ ಕೋಟಿ ಹಣದ ಕುರಿತು ನಾನು ಮಾಡಿದ ಪ್ರಶ್ನೆಗೆ ಕೊಲೆ ಬೆದರಿಕೆ ಒಡ್ಡಿದ್ದು ಎಷ್ಟರಮಟ್ಟಿಗೆ ಸರಿ, ಈ ರೀತಿಯ ಕೆಲಸ ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಪ್ರಜೆಗಳೇ ಆಯ್ಕೆ ಮಾಡಿರುವ ನಾಯಕ ಈ ರೀತಿಯಾಗಿ ವ್ಯವಹರಿಸುವುದು ಸರಿಯಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಮರ್ಕಲ್ ಹೇಳಿಕೆ ನೀಡಿದ್ದಾರೆ.

ನಿನ್ನೆ ರಾತ್ರಿ ಸುಮಾರು 7:30ಕ್ಕೆ ಪೊಲೀಸ್ ಠಾಣೆಗೆ ಬರಲು ಹೇಳಿದ್ದರು. ಠಾಣೆಯಲ್ಲಿ, ಶಾಸಕ ಎಂ. ಪಿ ಕುಮಾರಸ್ವಾಮಿಯವರು ನಿನಗೆ ವಾರ್ನಿಂಗ್ ಕೊಡಲು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ, ಪೊಲೀಸರನ್ನು ಗೂಂಡಾಗಳ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ನಾನು ಕ್ಷೇತ್ರದ ಅಭಿವೃದ್ದಿಯ ಕಡೆ ಗಮನ ಕೊಡುತ್ತಿರುವುದು ಇವರಿಗೆ ಸಹಿಸಲು ಆಗುತ್ತಿಲ್ಲ. ನಮ್ಮೂರಿನ ಭಾಗಗಳಾದ ಚೆಂದುವಳ್ಳಿ , ಬಾಳೂರು, ಬಲಿಗೆ, ಗ್ರಾಮಗಳ ರಸ್ತೆಯ ಅಭಿವೃದ್ದಿ ಕುರಿತು ನಾನು ಧ್ವನಿ ಎತ್ತಿದ್ದೆ ಮತ್ತು ಮಂಜೂರಾದ ಹಣದ ಬಳಕೆಯ ಕುರಿತು ಮಾಹಿತಿ ಕೇಳಿದ್ದೆ. ಇದನ್ನು ಸಹಿಸಲಾರದೆ  ಶಾಸಕರು  ಗೂಂಡಾ ವರ್ತನೆ ತೋರಿದ್ದಾರೆ, ಮತ್ತು ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನಲ್ಲಿ ಕೊಲೆ ಬೆದರಿಕೆಯ ಕುರಿತು ಸಾಕ್ಷ್ಯಾಧಾರಗಳು ಇದೆ. ನಾನು ಎಸ್ ಪಿ ಹಾಗೂ ಐಜಿ ಅವರಿಗೆ ಈ ಕುರಿತು ದೂರು ನೀಡುತ್ತಿದ್ದೇನೆ. ಅಲ್ಲದೇ ಲೋಕಾಯುಕ್ತಕ್ಕೂ ದೂರು ನೀಡುತ್ತೇನೆ. ನನ್ನ ಜೀವಕ್ಕೆ ಸಂಚಕಾರ ಉಂಟಾದರೆ ಶಾಸಕ ಎಂಪಿ ಕುಮಾರಸ್ವಾಮಿ ಅವರೇ ನೇರ ಹೊಣೆ ಯಾಗಿರುತ್ತಾರೆ.

 - ಸಚಿನ್ ಮರ್ಕಲ್, ನಿಡುವಾಳೆ ಗ್ರಾಮ ಪಂಚಾಯತ್ ಸದಸ್ಯ