ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪವಿರುವ ತನಿಕೋಡು ಅರಣ್ಯ ಇಲಾಖೆ ಗೇಟಿನಿಂದ ಎಸ್.ಕೆ ಬಾರ್ಡರ್ ಮೂಲಕ ಮಂಗಳೂರಿಗೆ ತೆರಳುವ ಕಾರ್ಕಳ ಸಮೀಪದ ಮಾಳ ಗೇಟ್‌ವರೆಗೆ ನಿಗದಿಪಡಿಸಿರುವ ಪ್ರಯಾಣದ ಸಮಯವನ್ನು ಅರಣ್ಯ ಇಲಾಖೆಯವರು ಕಡಿಮೆಗೊಳಿಸಬೇಕೆಂದು ಬಾಳೆಹೊನ್ನೂರು ಟ್ಯಾಕ್ಸಿಮೆನ್ ಅಸೋಸಿಯೇಷನ್ ಅಧ್ಯಕ್ಷ ಸುಂದರೇಶ್ ಮುದುಯಗುಣಿಯವರು ಆಗ್ರಹಿಸಿದ್ದಾರೆ.
ಕಾರ್ಕಳ, ಮಂಗಳೂರು ಮುಂತಾದ ಸ್ಥಳಗಳಿಗೆ ಶೃಂಗೇರಿಯ ತನಿಕೋಡು ಗೇಟಿನಿಂದ ಹಾಗೂ ಮಂಗಳೂರಿನಿಂದ ಶೃಂಗೇರಿ ಕಡೆಗೆ ಮಾಳಗೇಟ್‌ನಿಂದ ಸಂಚಾರ ಮಾಡಲು ಅರಣ್ಯ ಇಲಾಖೆಯವರು ಒಂದೂವರೆ ಗಂಟೆಗಳ ಕಾಲಾವಕಾಶವನ್ನು ನೀಡಿದ್ದಾರೆ. ತನಿಕೋಡು-ಮಾಳಗೇಟ್ ನಡುವೆ 39 ಕಿ.ಮೀ ಗಳ ಅಂತರವಿದೆ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಒಂದೂವರೆ ಗಂಟೆಯಲ್ಲಿ ಈ ರಸ್ತೆಯನ್ನು ಸಂಚರಿಸಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ. ಆದರೆ ಇಲ್ಲಿ ಸಂಚರಿಸಲು30 ರಿಂದ 45 ನಿಮಿಷಗಳು ಸಾಕಾಗುತ್ತದೆ. ಅವರು ನಿಗದಿಪಡಿಸಿದ ಸಮಯಕ್ಕಿಂತ ಮೊದಲೇ ಸಂಚರಿಸಿದರೆ ಪ್ರತೀ ವಾಹನಗಳಿಗೆ 300 ರಿಂದ 500 ರೂಗಳವರೆಗೆ ಅವೈಜ್ಞಾನಿಕವಾಗಿ ದಂಡ ಹಾಕಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ತನಿಕೋಡ್ ಮತ್ತು ಮಾಳಗೇಟ್ ನಲ್ಲಿ ವಾಹನಗಳು ಪ್ರವೇಶಿಸುವಾಗ ಅಲ್ಲಿರುವಂತಹ ಸಿಬ್ಬಂದಿ ವಾಹನ ಚಾಲಕರಿಗೆ ಇದರ ಬಗ್ಗೆ ಮಾಹಿತಿಯನ್ನಾಗಲಿ ಪಾಸ್ ಸಹ ನೀಡುವುದಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ. ವಾಹನದಲ್ಲಿರುವಂತಹ ಚಾಲಕರೇ ಅವರ ಬಳಿ ಹೋಗಿ ಪಾಸ್ ಪಡೆದು ಬರಬೇಕಾದ ಸ್ಥಿತಿಯಿದೆ. ಸಣ್ಣ ವಾಹನಗಳಿಗೆ ಮಾತ್ರ ಈ ನಿಯಮ ಮಾಡುತ್ತಿದ್ದಾರೆ ಭಾರಿ ಗಾತ್ರದ ವಾಹನಗಳಾದ ಬಸ್.ಲಾರಿ ಮುಂತಾದ ವಾಹನಗಳಿಗೆ ಯಾವುದೇ ರೀತಿಯ ನಿಯಮ ಮಾಡುತ್ತಿಲ್ಲ ಎಂದು ದೂರಿದ್ದಾರೆ.
ಎಸ್ ಕೆ ಬಾರ್ಡರ್ ಪ್ರದೇಶವು ರಾಷ್ಟಿಯ ಹೆದ್ದಾರಿ ಜಾಗವಾಗಿದ್ದು ಇಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಂಚಾರದ ಅವಧಿಗೆ ಸಮಯ ನಿಗದಿಗೊಳಿಸುವಹಾಗಿಲ್ಲ. ಹೆದ್ದಾರಿಯಲ್ಲಿ ಹಂಪ್ ಗಳನ್ನು ನಿರ್ಮಿಸುವಂತಿಲ್ಲ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಚಾಲಕರಿಗೆ ದಂಡವಿಧಿಸುತ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ 30-45 ನಿಮಿಷ ಸಮಯ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.





0 Comments