ಮಲೆನಾಡಿನಲ್ಲಿ ಮತ್ತೆ ಮತಾಂತರ ಚಟುವಟಿಕೆ ಗರಿಗೆದರಿದೆ. ಕಳೆದ ಎರಡು ವರ್ಷಗಳಿಂದ ಕೊಪ್ಪ ಹಾಗೂ ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಹಲವು ಕುಟುಂಬಗಳು ಹಿಂದೂ ಧರ್ಮವನ್ನು ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ.
ಕೊಪ್ಪದ ಚೌಕಿಯಲ್ಲಿ ಚೆಲುವರಾಜು ಹಾಗೂ ಅವರ ಪತ್ನಿ ವಾಸಿಸುತ್ತಿದ್ದರು, ಕೆಲ ಸಮಯದ ಹಿಂದೆ ಪತ್ನಿ ಮತಾಂತರಗೊಂಡಿದ್ದರು. ಆದರೆ ಈಗ ಪತಿ ಚೆಲುವರಾಜ್ ಸಹ ಮತಾಂತರಗೊಂಡಿದ್ದು ಮನೆಯ ಎದುರಿನ ಹಿಂದೂ ದೇವರಾದ ಶಿವ, ಗಣಪತಿಯ ಫೋಟೋವನ್ನು ಸಹ ತೆಗೆಯಲಾಗಿ ಗ್ರಾಮಸ್ಥರಿಗೆ ವಿಷಯ ತಿಳಿದಿದೆ. ನಂತರ ನೋಡಿದಾಗ ಊರಿನಲ್ಲಿ ಬಹಳಷ್ಟು ಜನರು ಮತಾಂತರವಾಗಿರುವುದು ತಿಳಿದಿದೆ.
ನೆನ್ನೆಯ ದಿನ ನಾಗರಾಜ್ ಹಾಗೂ ಕೇಶವ ಎಂಬ ಇಬ್ಬರು ಅದೇ ಊರಿನ ಗಣೇಶ್ ಹಾಗೂ ಇತರರಿಗೆ ಕ್ರಿಶ್ಚಿಯನ್ ಆಗಿ ಮತಾಂತರ ಹೊಂದುವಂತೆ ಪ್ರಚೋದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು. ಗಣೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಿಂದೂ ಸಂಘಟನೆಗಳ ಪ್ರತಿಭಟನೆ ನಂತರ ಗಣೇಶ್ ಅವರ ದೂರಿನ ಆಧಾರದ ಮೇಲೆ ನಾಗರಾಜ್ ಮೇಲೆ ಕೇಸ್ ದಾಖಲಿಸಿ ಠಾಣೆಗೆ ಕರೆಸಿ ತನಿಖೆ ನಡೆಸಿದ್ದಾರೆ.ಕಿಂಗ್ ಪಿನ್ ಕೇಶವ ಎಂಬಾತ ತಲೆ ಮರೆಸಿಕೊಂಡಿದ್ದು, ಈತ ಹಲವು ಪ್ರಭಾವಿಗಳ ಸಂಪರ್ಕ ಹೊಂದಿರುವುದರಿಂದ ಬಂಧಿಸುತ್ತಿಲ್ಲ ಎಂದು ಹಿಂದೂಪರ ಸಂಘಟನೆಗಳು ಆರೋಪಿಸುತ್ತಿವೆ.
ಇಷ್ಟವಿಲ್ಲದಿದ್ದರೂ ಒತ್ತಾಯ ಪೂರ್ವಕವಾಗಿ ನನ್ನನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಗಣೇಶ್ ಅವರು ಪುರುಷೋತ್ತಮ ಅವರ ಮುಖೇನ ಕೊಪ್ಪ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈಗ ಘಟನೆ ನಡೆದಿರುವ ಕೊಪ್ಪದ ಚೌಕಿ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಲ್ಲಿ 8 ಕುಟುಂಬದ 45ಕ್ಕೂ ಅಧಿಕ ಜನರು ಮತಾಂತರವಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.ಇನ್ನೊಂದೆಡೆ ಈಗ ಮತಾಂತರ ಹೊಂದಿರುವ ಚೆಲುವರಾಜು ತಾನು ಸ್ವ ಇಚ್ಛೆಯಿಂದ ಮತಾಂತರ ಹೊಂದಿರುವುದಾಗಿ ತಿಳಿಸಿದ್ದಾನೆ.
ಘಟನೆಯ ಹಿನ್ನೆಲೆ :
ಹದಿನೈದು ದಿನಗಳ ಹಿಂದೆ ಕ್ರೈಸ್ತ ಮತದ ಕಣ್ಣನ್ ಎಂಬ ವ್ಯಕ್ತಿ ನಿಧನ ಹೊಂದಿದ್ದರು, ಆ ಸಂದರ್ಭದಲ್ಲಿ ಅವರ ಮೃತ ಶರೀರವನ್ನು ಸಾಗಿಸುವ ಸಲುವಾಗಿ ಮುಕ್ತಿ ವಾಹನದ ಚಾಲಕನಾಗಿ ಗಣೇಶ್ ರವರು ಹೋಗಿದ್ದರು. ಈ ಸಂದರ್ಭದಲ್ಲಿ ನಾಗರಾಜ್ ಗಣೇಶ್ ಅವರೊಂದಿಗೆ ಪರಿಚಯವನ್ನು ಬೆಳೆಸಿಕೊಂಡಿರುತ್ತಾರೆ. ನಂತರದ ದಿನಗಳಲ್ಲಿ ಕ್ರೈಸ್ತ ಮತಕ್ಕೆ ಮತಾಂತರಗೊಳ್ಳಿ ನಿಮಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡುತ್ತೇವೆ, ನಿಮ್ಮಂತಹ ಎಷ್ಟೋ ಜನರು ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದಾರೆ ಎಂದು ಗಣೇಶ್ ಅವರನ್ನು ಮತಾಂತರ ಆಗುವಂತೆ ಪ್ರಚೋದನೆ ಮಾಡಿರುತ್ತಾರೆ.
ನಂತರದ ದಿನಗಳಲ್ಲಿ ನೇರವಾಗಿ ಗಣೇಶ್ ಅವರನ್ನು ಭೇಟಿಯಾಗಿ ಪದೇ ಪದೇ ಕ್ರೈಸ್ತ ಸಮುದಾಯವನ್ನು ಸೇರುವಂತೆ ಒತ್ತಡ ಹೇರುತ್ತಿದ್ದರು ಎಂದು ತಿಳಿದು ಬಂದಿದೆ. ನಿನ್ನೆರಾತ್ರಿ ಚೌಕಿಯಲ್ಲಿರುವ ಚೆಲುವರಾಜು ಎಂಬ ವ್ಯಕ್ತಿಯ ಮನೆಗೆ ಗಣೇಶ್ ರನ್ನು ಕರೆಸಿ ಒತ್ತಡ ಹೇರಿ ಮತಾಂತರವಾಗುವಂತೆ , ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ನಡೆದು ಕೊಂಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಗಣೇಶ್ ಒತ್ತಾಯಿಸಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ಈ ಭಾಗದಲ್ಲಿ ಅತಿಯಾದ ಮತಾಂತರ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪದ ಮೇಲೆ ಹಲವು ಬಾರಿ ಎರಡು ಸಮುದಾಯದ ನಡುವೆ ಸಂಘರ್ಷಗಳು ಸಹ ನಡೆದಿತ್ತು. ಇದೇ ಮುಂದೆ ಚರ್ಚ್ ದಾಳಿಯಂತಹ ಘಟನೆಗೂ ಕಾರಣವಾಗಿತ್ತು.
ಪೊಲೀಸ್ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ತನಿಖೆ ಮಾಡಿ, ಆಮಿಷ ಒಡ್ಡಿ ಮತಾಂತರಗೊಳಿಸುವ ಸಮಾಜಘಾತುಕರ ಹೆಡೆಮುರಿ ಕಟ್ಟಿ ಸಮಾಜದ ಶಾಂತಿ ಕಾಪಾಡಬೇಕಿದೆ.




0 Comments