ಹಾಸನ : ಹಬ್ಬದ ನಿಮಿತ್ತ ಅಕ್ಕ ಭಾವನನ್ನು ಹಾಗೂ ಅವರ ಪುಟ್ಟ ಕಂದನನ್ನು ಊರಿಗೆ ಕರೆದುಕೊಂಡು ಹೋಗುವ ಸಲುವಾಗಿ ಬಂದಿದ್ದ ಯುವಕನು ಅಪಘಾತದಿಂದಾಗಿ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಹಾಸನದ ಕೊಣನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ  ದುರಂತ ಸಂಭವಿಸಿದ್ದು, ಕಾರು ಹಾಗೂ ಲಾರಿಯ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ದಾರುಣ ಅಂತ್ಯ ಹೊಂದಿದ್ದಾರೆ. ಮೃತ ಹೊಂದಿದ ವ್ಯಕ್ತಿಗಳನ್ನು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಲಾಳನಪುರದ ಶಂಕರ್ ಹಾಗು ಅರಕಲಗೂಡಿನ ಪುಟ್ಟ ಮಗು ಎಂದು ಪತ್ತೆ ಮಾಡಲಾಗಿದೆ.

ಕಾರಿನಲ್ಲಿ ನಾಲ್ವರು ಪ್ರಯಾಣ ಮಾಡುತ್ತಿದ್ದರು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು  ಬಿ.ಎಸ್.ಎಫ್ ಯೋಧ ಮಧು ಮತ್ತು ಚೈತ್ರ ದಂಪತಿಗಳು ಎಂದು ಗುರುತಿಸಲಾಗಿದೆ. ಸದ್ಯಕ್ಕೆ  ಅರಕಲಗೂಡಿನ ತಾಲೂಕು  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಈ ಅಪಘಾತದಲ್ಲಿ ತನ್ನ ಪುಟ್ಟ ಮಗುವನ್ನು  ಕಳೆದುಕೊಂಡಿದ್ದಾರೆ.