ರಾಜ್ಯದ ಗೃಹಸಚಿವ ಆರಗ ಜ್ಞಾನೇಂದ್ರರವರ ಹುಟ್ಟೂರು ತೀರ್ಥಹಳ್ಳಿ ತಾಲೂಕಿನಾದ್ಯಂತ ದನಗಳ್ಳರ ಹಾವಳಿ ವ್ಯಾಪಕವಾಗಿ ಹೆಚ್ಚಾಗಿದೆ. ನಿರ್ಭಯವಾಗಿ ಕಳ್ಳರು ತಮ್ಮ ದುಷ್ಕೃತ್ಯವನ್ನು ನಡೆಸುತ್ತಲೇ ಇದ್ದಾರೆ.
ನಿನ್ನೆ ರಾತ್ರಿ 2 ಗಂಟೆಯ ವೇಳೆಯಲ್ಲಿ ತೀರ್ಥಹಳ್ಳಿ ಪಟ್ಟಣದ ಬಾಳೆಬೈಲಿನಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷರ ಮನೆ ಎದುರು ಮಲಗಿದ್ದ ದನಗಳನ್ನು ವಿಕೃತವಾಗಿ ಕಾರಿನಲ್ಲಿ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ದನಕಳ್ಳರಿಂದ ಗ್ರಾಮೀಣ ಭಾಗಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ತಾವು ಸಾಕಿದ ದನಗಳನ್ನು ತಮ್ಮ ಕಣ್ಣೆದುರೇ ಕದ್ದು ಪರಾರಿಯಾಗುತ್ತಿದ್ದರು ಏನೂ ಮಾಡಲಾಗದಂತಹ ಅಸಹಾಯಕ ಸ್ಥಿತಿಯಲ್ಲಿ ಜನರಿದ್ದಾರೆ. ಒಂದು ವೇಳೆ ಜನರು ಪ್ರತಿರೋಧವನ್ನು ತೋರಿದರೆ ಅವರಿಗೆ ಕತ್ತಿ, ರಾಡು ಇನ್ನಿತರ ಮಾರಕಾಸ್ತ್ರಗಳನ್ನು ಅಥವಾ ಬೇರೆ ಉಪಕರಣಗಳನ್ನು ತೋರಿಸಿ ಹೆದರಿಸುವ ಮಟ್ಟಕ್ಕೆ ಈ ಕಳ್ಳರು ತಯಾರಾಗಿದ್ದಾರೆ.
2 ವರ್ಷದಲ್ಲಿ 200 ಕ್ಕೂ ಹೆಚ್ಚು ಪ್ರಕರಣಗಳು ತೀರ್ಥಹಳ್ಳಿಯಲ್ಲಿ ದಾಖಲಾಗಿದ್ದರು ಇದುವರೆಗೂ ಒಬ್ಬ ಕಳ್ಳನನ್ನು ಪೊಲೀಸರು ಹಿಡಿದಿಲ್ಲ ಆದ್ದರಿಂದ ಕಳ್ಳರಿಗೆ ಪೋಲೀಸರ ಭಯವೇ ಇಲ್ಲದ ಹಾಗೆ ಅವರು ತಮ್ಮ ಕಳ್ಳ ಕೃತ್ಯವನ್ನು ಎಂದಿನಂತೆಯೇ ನಡೆಸುತ್ತಿದ್ದಾರೆ.
ಗೃಹಮಂತ್ರಿ ಆರಗ ಜ್ಞಾನೇಂದ್ರರವರು ದನಗಳ್ಳರ ಹಾವಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸೂಚಿಸಿದ್ದರೂ ಸಹ ಅವರನ್ನು ಹಿಡಿಯಲು ಸಾಧ್ಯವಾಗದೇ ಇರುವುದು ವಿಷಾದನೀಯ ಸಂಗತಿ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಳ್ಳರು ಪೊಲೀಸರಿಗೆ ಸವಾಲು ಒಡ್ಡುವ ರೀತಿಯಲ್ಲಿ ರಾಜಾರೋಷವಾಗಿ ಇಂತಹ ನೀಚ ಕೃತ್ಯವನ್ನು ಎಸಗುತ್ತಿರುವುದು ಮಹಾ ಪ್ರಮಾದವೆ ಸರಿ. ರಾಜ್ಯದಲ್ಲಿ ಗೋ ಹತ್ಯೆಯ ವಿರುದ್ಧ ಹಾಗೂ ಗೋವುಗಳ ಅಕ್ರಮ ಸಾಗಾಟದ ವಿರುದ್ಧ ಹಲವಾರು ಕಾನೂನುಗಳು ಜಾರಿಯಲ್ಲಿದೆ ಆದರೂ ಸಹ ಅಕ್ರಮವಾಗಿ ಗೋವುಗಳ ಸಾಗಾಟವನ್ನು ತಡೆ ಹಿಡಿಯಲು ಆಗದೆ ಇರುವುದು ಬೇಸರದ ಸಂಗತಿ ಎಂದು ಸ್ಥಳೀಯರೊಬ್ಬರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.




0 Comments