ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಜಿಲ್ಲಾಡಳಿತ ಚಿಕ್ಕಮಗಳೂರು, ನೆಹರು ಯುವಕೇಂದ್ರ ಚಿಕ್ಕಮಗಳೂರು ಹಾಗೂ ಶ್ರೀ ಜೆ.ಸಿ.ಬಿ.ಎಂ ಕಾಲೇಜಿನ ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್ಸ್ ರೇಂಜರ್ಸ್ ಘಟಕದ ಸಹಯೋಗದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಹಾಗೂ ಪಂಡಿತ ದೀನ್ ದಯಾಳ್ ಅವರ ಜನ್ಮದಿನದ ಸಲುವಾಗಿ ಇಂದು ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಕಾರ್ಯಕ್ರಮ ನಡೆಯಿತು.

ಶೃಂಗೇರಿ ಠಾಣೆಯ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ಅವರು ಮ್ಯಾರಥಾನ್ ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾ ಯುವ ಅಧಿಕಾರಿ ಅಭಿಷೇಕ್ ಚವರೆ, ನೆಹರು ಯುವಕೇಂದ್ರ ಒಂದು ಸಾಮಾಜಿಕ ಸಂಘಟನೆಯಾಗಿ ದೇಶದ ಸೇವೆಯಲ್ಲಿ ತನ್ನೊಡನೆ ವಿದ್ಯಾರ್ಥಿಗಳನ್ನು ಸೆಳೆದುಕೊಂಡಿದೆ, ಸಣ್ಣ ವಯಸ್ಸಿನಿಂದಲೇ ಯುವ ಸಮಾಜದಲ್ಲಿ ದೇಶಭಕ್ತಿ, ಸೇವೆ, ಮುಂತಾದ ವಿಷಯಗಳನ್ನು  ವೃದ್ಧಿಸುವ ಕೆಲಸ ನೆಹರು ಯುವಕೇಂದ್ರ ಮಾಡುತ್ತಲಿದೆ ಎಂದರು.  ನಂತರ ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಕುರಿತು ಮಾತನಾಡಿದ ಅವರು ರಾಷ್ಟ್ರ ಭಕ್ತಿ ಹಾಗೂ ಹಲವಾರು ಉತ್ತಮ ತತ್ವಗಳ ಮೂಲಕ ಪಂಡಿತ ದೀನ್ ದಯಾಳ್ ಅವರು ಸಮಾಜವನ್ನು ಒಗ್ಗೂಡಿಸಲು ದೊಡ್ಡ ಮಟ್ಟದ ಪರಿಶ್ರಮವನ್ನು ಪಟ್ಟಿದ್ದರು ಯುವ ಜನತೆ ಅದನ್ನು ಸ್ಮರಿಸಬೇಕಿದೆ ಎಂದರು. 

ನಂತರ ಮಾತನಾಡಿದ ಶೃಂಗೇರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರವಿ ಬಿ.ಎಸ್ ಅವರು ಪ್ರಸ್ತುತ ಸನ್ನಿವೇಶಗಳಲ್ಲಿ ಯುವಜನತೆ ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳ ಕುರಿತಾಗಿ ಮಾತನಾಡಿದರು. ಸ್ವಾತಂತ್ರ್ಯಾ ನಂತರದಲ್ಲಿ  ದೇಶದ ಯುವಜನತೆಯ ದಾರಿ ತಪ್ಪಿಸುತ್ತಿರುವ ಡ್ರಗ್ಸ್ ಸೇವನೆ, ದುಶ್ಚಟಗಳ ದಾಸರಾಗುವುದು, ವಿಪರೀತ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಯುವಕರು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ, ಸಧೃಡ ಸಮಾಜದ ನಿರ್ಮಾಣಕ್ಕೆ ಸದಾ ಮುನ್ನೆಲೆಯಲ್ಲಿ ನಿಲ್ಲಬೇಕು, ದೇಹ ಸದೃಢವಾಗಿದ್ದರಷ್ಟೇ ದೇಶ ಸದೃಢವಾಗಿರಲು ಸಾಧ್ಯ ಎಂದು ಅವರು ಹೇಳಿದರು. ಹಾಗು ವಿದ್ಯಾರ್ಥಿಗಳಲ್ಲಿರುವ ಕೆಲವು ಸಂಶಯ, ಗೊಂದಲಗಳಿಗೆ, ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಸಿ.ಬಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಎಂ. ಸ್ವಾಮಿ ಅವರು ವಹಿಸಿಕೊಂಡಿದ್ದರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶೃಂಗೇರಿ ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್  ಹಾಗೂ ಜಿಲ್ಲಾ ಯುವ ಅಧಿಕಾರಿ ಅಭಿಷೇಕ್ ಚವರೆ, ಹಾಗೂ ಎನ್.ಸಿ.ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಡಾ. ಕುಮಾರಸ್ವಾಮಿ ಉಡುಪ, ಹಾಗೂ ರೋವರ್ಸ್ ರೇಂಜರ್ಸ್ ಘಟಕದ ಮುಖ್ಯಸ್ಥರಾದ ಅನುಶ್ರೀ ಹೆಬ್ಬಾರ್, ಹಾಗೂ ಕಾಲೇಜಿನ ಎನ್. ಎಸ್.ಎಸ್ ಮುಖ್ಯಸ್ಥರಾದ ಪ್ರಶಾಂತ್, ಸಂತೋಷ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.