ಬಣಕಲ್ : ಇದ್ದ  ಮೂರು ಮಕ್ಕಳಲ್ಲಿ ಒಬ್ಬ ಮಗ ತಂದೆಯನ್ನು ಹತ್ಯೆ  ಮಾಡಿ  ಜೈಲುಪಾಲಾಗಿದ್ದಾನೆ, ಇನ್ನಿಬ್ಬರು ಬುದ್ದಿಮಾಂದ್ಯರು, ಅಂಗವೈಕಲ್ಯ ಪೀಡಿತ  ಮಕ್ಕಳನ್ನು ಸಾಕಲಾಗದೆ  ಅನಾಥಾಶ್ರಮಕ್ಕೆ ಕಳುಹಿಸಿ ಎಲ್ಲರೂ ಇದ್ದರೂ ಇಲ್ಲದಂತಾಗಿದೆ ತಾಯಿಯ ಜೀವನ ಕಥೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನ ಚೆನ್ನಡಲು  ಗ್ರಾಮದ ಸುಂದರ ಪೂಜಾರಿ ಹಾಗೂ ಅರುಣ ದಂಪತಿಗಳಿಗೆ ಮೂವರು ಮಕ್ಕಳು. ಇಬ್ಬರು ಮಕ್ಕಳು ಹುಟ್ಟಿನಿಂದ ಬುದ್ಧಿಮಾಂದ್ಯತೆ ಹಾಗೂ ಅಂಗವೈಕಲ್ಯದಿಂದ ಬಳಲುತ್ತಿದ್ದು  ಹಿರಿಯ ಮಗ ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.  ತಂದೆ ಸುಂದರ ಪೂಜಾರಿ ಅವರು ಕೂಲಿ ಕೆಲಸ ಮಾಡಿ ಕುಟುಂಬವನ್ನು  ಸಾಕುತ್ತಿದ್ದರು, ತಾಯಿ ಅರುಣ ಅವರು ಅಂಗವಿಕಲ ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರುತ್ತಿದ್ದರು.

ಸುಂದರ ಪೂಜಾರಿಯವರು 2020ರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಇದರಿಂದ ಸುಂದರ ಪೂಜಾರಿ ಅವರ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ  ಪ್ರಸಾರವಾಗುತ್ತಿದ್ದಂತೆ, ಹಲವಾರು ಸಂಘ-ಸಂಸ್ಥೆಗಳು,  ಜನಪ್ರತಿನಿಧಿಗಳು, ದಾನಿಗಳು, ಲಕ್ಷಾಂತರ ರೂಪಾಯಿ ನೆರವು ನೀಡಿದ್ದರು.

ಈ ವಿಷಯವನ್ನು ತಿಳಿದ ಬೆಂಗಳೂರಿನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಗ, ಲಾಕ್ಡೌನ್ ಸಂದರ್ಭದಲ್ಲಿ ಮನೆಗೆ ಬಂದಾಗ ಮಗ ಹಣಕ್ಕಾಗಿ ಪೀಡಿಸುತ್ತಿದ್ದ.

ಹಣದ ಆಸೆಗೆ  ಪಾರ್ಶ್ವವಾಯು ಪೀಡಿತನಾಗಿ ಮಲಗಿದ್ದ ತಂದೆಯನ್ನು ಕಡಿದು ಹತ್ಯೆ ಮಾಡಿ, ಮಗ ಜೈಲು ಪಾಲಾಗಿದ್ದಾನೆ. ಮನೆಗೆ ಆಧಾರವಾಗಿದ್ದ ಸುಂದರ ಪೂಜಾರಿ ನಿಧನದಿಂದ ದಿಕ್ಕುತೋಚದೆ ಸಂಕಷ್ಟದಿಂದ ಇಬ್ಬರೂ ಬುದ್ದಿಮಾಂದ್ಯ ಅಂಗವಿಕಲ ಮಕ್ಕಳನ್ನು ಸಾಕುತ್ತಿದ್ದ ಅರುಣ  ಅವರ ಮೇಲೆ, 1 ತಿಂಗಳ ಹಿಂದೆ ಸಂಬಂಧಿಕರೊಬ್ಬರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು ,ತಲೆಗೆ  ಗಂಭೀರ ಗಾಯಗೊಂಡ ಅರುಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

 ಬುದ್ಧಿ ಮಾಂದ್ಯ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ತಾಯಿ ಅರುಣ ಗೆ ಕಷ್ಟ ವಾಗುತ್ತಿತ್ತು.  ತಾಯಿಯ ಮನವೊಲಿಸಿದ  ಊರಿನ ಗ್ರಾಮಸ್ಥರು  ಹಾಗೂ ಸಾರ್ವಜನಿಕರು  ಇಬ್ಬರು ಮಕ್ಕಳನ್ನು ಅನಾಥ ಶ್ರಮಕ್ಕೆ ಬಿಡಲು ಒಪ್ಪಿಸಿದ್ದು, ಬೆಂಗಳೂರಿನ ಬನ್ನೇರುಘಟ್ಟದ RVN  ಫೌಂಡೇಶನ್ ಅನಾಥಾಶ್ರಮಕ್ಕೆ ಮಕ್ಕಳನ್ನು ಬಿಟ್ಟಿದ್ದಾರೆ. ಏಕಾಂಗಿಯಾಗಿ ಕಣ್ಣೀರು ಹಾಕುತ್ತಿದ್ದ ಅರುಣ ಅವರ ದೃಶ್ಯ ಎಲ್ಲರ ಮನಕಲಕುತ್ತಿದೆ. ಅನಾಥಾಶ್ರಮಕ್ಕೆ ಹೋಗಲು ಆಂಬ್ಯುಲೆನ್  ಹಣವನ್ನು ಬಾಳೂರು ಗ್ರಾಮ ಪಂಚಾಯಿತಿ ಮತ್ತು ಬಾಳೂರು ಪೊಲೀಸರ ವತಿಯಿಂದ ನೀಡಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ .ಎಂ .ಭರತ್, ಬಾಳುರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ ಬಿ ಮಂಜುನಾಥ್ ಬಾಳುರು,  ಸದಸ್ಯರಾದ ಮನೋಜ್. ಬಾಳೂರು ಠಾಣೆಯ ಪಿಎಸ್ಐ ರೇಣುಕಾ, ಸಿಬ್ಬಂದಿಗಳಾದ ಮಹೇಶ್, ವೈಭವ, ಮೂಡಿಗೆರೆ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಅಧ್ಯಕ್ಷ ಫಿಶ್ ಮೋಣು , ಕಾರ್ಯಧ್ಯಕ್ಷ ಅಬ್ದುಲ್ ರಹಮಾನ್, ಉಪಾಧ್ಯಕ್ಷ ಹಸೇನಾರ್ ಬಿಳಗುಳ,  ಗ್ರಾಮಸ್ಥರಾದ ಬಾಳೂರು ರೋಹಿತ್, ಮದನ್ ,ಜಗದೀಶ್ ರಾಜು ,ಸಂದೀಪ್,  ವಿಜೇಂದ್ರ, ಸುದೀಪ್ ,ಪೂರ್ಣೇಶ್, ಚಂದ್ರಶೇಖರ್, ರವಿ ,ಅಣ್ಣಪ್ಪ ಇನ್ನಿತರರು ಇದ್ದರು

ತನು ಕೊಟ್ಟಿಗೆಹಾರ, ವರದಿಗಾರರು.