ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮುಳ್ಳೋಡಿಯಲ್ಲಿ ಕೆಸರು ಗದ್ದೆ ಓಟದ ಸ್ಪರ್ಧೆಯಿದೆ ವಿಶ್ವದ ಪ್ರಸಿದ್ದ ಓಟಗಾರ ಉಸೈನ್ನ್ ಬೋಲ್ಟ್ ಸ್ಪರ್ಧೆ ಮಾಡುತ್ತಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಳ್ಳೋಡಿ ರಸ್ತೆಯ ಸ್ಥಿತಿ ಹೇಳತೀರದು. ಆ ರಸ್ತೆಯನ್ನ ನೋಡಿದ್ರೆ ಯಾರೂ ಕೂಡ ಇದನ್ನು ರಸ್ತೆ ಎಂದು ಹೇಳಲಾರರು. ರಸ್ತೆ ತುಂಬಾ ಗುಂಡಿಗಳೇ, ಕೆಸರು ಗದ್ದೆಯ ರೀತಿ ಬದಲಾಗಿರೋ ರಸ್ತೆಯಲ್ಲಿ ಓಡಾಡಬೇಕೆಂದರೆ ತಾಕತ್ತು ಇರಬೇಕು. ಸಾಮಾನ್ಯ ವ್ಯಕ್ತಿಗಳು ಈ ರಸ್ತೆಯಲ್ಲಿ ಓಡಾಡೋಕೆ ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕ್ನಲ್ಲಿ ಓಡಾಡಿದ್ರೆ ಬೈಕ್ ನೊಂದಿಗೆಯೆ ಬೀಳೋದು ಗ್ಯಾರಂಟಿ. ನಡೆದುಕೊಂಡು ಹೋಗಲು ಕೂಡ ಆಗದೆ ಇರುವ ಹಾಗೆ ಈ ರಸ್ತೆ ಇದೆ.
ಜನರ ಬಳಿಗೆ ಇಲ್ಲಿನ ಜನ ಪ್ರತಿನಿಧಿಗಳು ಬರುವುದು ಕೇವಲ ಮತ ಯಾಚಿಸಲು ಮಾತ್ರ, ಚುನಾವಣೆಯ ನಂತರದಲ್ಲಿ ಇಲ್ಲಿನ ಜನರ ಕಷ್ಟವನ್ನು ಯಾರೂ ಕೇಳಲು ಬರುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ ರಾಜಕಾರಣಿಗಳು ಈ ಗ್ರಾಮದ ಜನರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಮನಸ್ಸು ಮಾಡುತ್ತಿಲ್ಲ.
ನೂರಕ್ಕೂ ಅಧಿಕ ಮಕ್ಕಳು ಈ ದಾರಿಯಲ್ಲಿಯೇ ಶಾಲೆಗೆ ಹೋಗಬೇಕು, ಮಕ್ಕಳು ಎರಡು ವರ್ಷಗಳ ಕಾಲದಿಂದ ಕೊರೋನ ಮಹಾಮಾರಿಯಿಂದ ಶಾಲೆಗೆ ಹೋಗದೆ ಇದ್ದರೆ, ಪ್ರಸ್ತುತ ರಸ್ತೆ ಸಮಸ್ಯೆಯಿಂದಾಗಿ ಶಾಲೆಗೆ ಹೋಗಲು ಆಗುತ್ತಿಲ್ಲ. ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಕುರಿತಾಗಿ ಗಮನ ಹರಿಸಿ ರಸ್ತೆ ಸಂಕಲ್ಪವನ್ನು ಸಮರ್ಪಕವಾಗಿ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




0 Comments