ರಾಜ್ಯದ ಕರಾವಳಿ, ಮಲೆನಾಡು, ಹಾಗೂ ಉತ್ತರಕನ್ನಡ ಭಾಗದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ರಿಂಗಣಿಸಿರುವುದು ಜನರಲ್ಲಿ ಆತಂಕವನ್ನು ಮೂಡಿಸಿತ್ತು.
ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್ ಆನ್ ಆಗಿದೆ ಎಂಬ ಸುದ್ದಿಯು ತಿಳಿಯುತ್ತಿದ್ದಂತೆ ಕೇಂದ್ರದ ಗುಪ್ತಚರ ತಂಡ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೊಪ್ಪ ತಾಲ್ಲೂಕಿನ ಕಲ್ಮಕ್ಕಿ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿಯನ್ನು ಕಲೆಹಾಕಿದ್ದಾರೆ,
ಕಲ್ಮಕ್ಕಿ ಗ್ರಾಮದಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ತುರಾಯಾ ಸ್ಯಾಟಲೈಟ್ ಫೋನ್ ಸಿಗ್ನಲ್ 30 ಸೆಕೆಂಡ್ ಗಳ ಕಾಲ ಸಿಕ್ಕಿದ್ದು ನಂತರ ಫೋನ್ ಆಫ್ ಆಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಶ್ರೀಲಂಕಾದಿಂದ ಐಸಿಸ್ ತರಬೇತಿಯನ್ನು ಪಡೆದುಕೊಂಡು ಬಂದ ಶಂಕಿತ ಉಗ್ರರು ಕೇರಳದ ಮೂಲಕ ಕರ್ನಾಟಕದ ಕರಾವಳಿ ಭಾಗಕ್ಕೆ ನುಸುಳಬಹುದು ಎಂದು ಶಂಕೆ ವ್ಯಕ್ತವಾದ ನಂತರ ಕರಾವಳಿ ಭಾಗದಲ್ಲಿ ಎಚ್ಚರಿಕೆಯಿಂದ ಇರಲು ಹಾಗೂ ಅನುಮಾನಾಸ್ಪದ ವ್ಯಕ್ತಿಯ ಮೇಲೆ ಗಮನವನ್ನು ಇಡಲು ಸೂಚನೆಯನ್ನು ನೀಡಲಾಗಿತ್ತು, ಈ ನಡುವೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಫೋನ್ ರಿಂಗಣಿಸಿರುವುದು ಜನರಲ್ಲಿ ಆತಂಕವನ್ನು ಮೂಡಿಸಿದೆ.
ಕಲ್ಮಕ್ಕಿ ಗ್ರಾಮದಲ್ಲಿ ದೊರೆತ ಸ್ಯಾಟಲೈಟ್ ಸಿಗ್ನಲ್ 30 ಸೆಕೆಂಡ್ ಗಳ ಕಾಲ ಮಾತ್ರ ದೊರೆತಿರುವುದರಿಂದ ಯಾವುದೇ ರೀತಿಯ ವಿದೇಶ ಕರೆ ಮಾಡಲು ಸಾಧ್ಯವಾಗಿಲ್ಲ ಹಾಗೂ ಈ ರೀತಿಯ ಸ್ಯಾಟಲೈಟ್ ಫೋನ್ ನನ್ನು ಉಪಯೋಗಿಸುವವರು ಶಿವಮೊಗ್ಗ ಮಾರ್ಗವಾಗಿ ಕರಾವಳಿ ಪ್ರದೇಶಕ್ಕೆ ಸಂಚರಿಸುತ್ತಿರುವ ಸಮಯದಲ್ಲಿ ಸಿಗ್ನಲ್ ಸಿಕ್ಕಿರಬಹುದು ಎಂದು ಗುಪ್ತಚರ ಇಲಾಖೆಯವರು ಊಹಿಸಿದ್ದಾರೆ.




0 Comments