ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಯುವ ಮೋರ್ಚಾ ವತಿಯಿಂದ, ಕಾಂಗ್ರೆಸ್ ನ ರಾಜ್ಯ ಮಹಿಳಾ ವಕ್ತಾರೆ ಬಿಂದು ಗೌಡ ವಿರುದ್ಧ ಅವಾಚ್ಯ ಪದ ಬಳಕೆಯ ಕುರಿತು ದೂರು ದಾಖಲಾಗಿದೆ.
ಬಿಂದು ಗೌಡ ಅವರು ಬಿಜೆಪಿಯ ಮಹಿಳಾ ನಾಯಕಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಳವಿಕಾ ಅವಿನಾಶ್ ಅವರ ಕುರಿತು ಅವಾಚ್ಯ ಪದಪ್ರಯೋಗವನ್ನು ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕು ಪೊಲೀಸ್ ಠಾಣಾಧಿಕಾರಿಗಳಿಗೆ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾದ ಮಂಜುನಾಥ್ ಕಾರ್ಬೈಲ್ ಹಾಗೂ ಉಪಾಧ್ಯಕ್ಷರಾದ ಶರತ್ ಬಿಳುಕೊಪ್ಪ ದೂರು ದಾಖಲಿಸಿದ್ದಾರೆ.
ಮಹಿಳೆಯನ್ನು ದೇವತೆಯ ರೂಪದಲ್ಲಿ ನೋಡುವ ಸಮಾಜ ನಮ್ಮದು, ನಿಮ್ಮಂತಹ ಕೆಟ್ಟ ಕ್ರಿಮಿಗಳಿಂದ ಇಡೀ ಮಹಿಳಾ ಸಮಾಜವೇ ತಲೆ ತಗ್ಗಿಸಬೇಕಾಗುತ್ತದೆ. ನೀವು ಒಬ್ಬ ಮಹಿಳೆಯಾಗಿ, ಮಹಿಳೆಯರ ಬಗ್ಗೆ ಇಷ್ಟೊಂದು ಕೆಟ್ಟ ಪದ ಪ್ರಯೋಗ ಸರಿಯೇ ಎಂದು ಬಿಂದು ಗೌಡ ಅವರನ್ನು ಬಿಜೆಪಿ ಯುವ ಮೋರ್ಚಾ ಪ್ರಶ್ನೆ ಮಾಡಿದೆ.
ಇದು ನಿಮ್ಮ ಮನೆಯ ಸಂಸ್ಕೃತಿಯೇ, ಇಲ್ಲ ನಿಮ್ಮ ಪಕ್ಷ ಕಲಿಸಿದ ಸಂಸ್ಕೃತಿಯೇ. ನಾಲಿಗೆಗೆ ಎಲುಬು ಇಲ್ಲ ಎಂದು ಸಮಾಜಕ್ಕೆ ತಿಳಿದಿದೆ, ನಿಮ್ಮ ಎಲುಬಿಲ್ಲದ ನಾಲಿಗೆಯ ಪದಪ್ರಯೋಗವನ್ನು ನಿಮ್ಮ ಪಕ್ಷದ ಮೇಲೆ ತೀಟೆ ತೀರಿಸಿಕೊಳ್ಳಿ, ನಮ್ಮ ಪಕ್ಷದ ಮೇಲೆ ನಾಲಿಗೆ ಹರಿ ಬಿಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ತಾಯಿಯ ಆಸುಪಾಸಿನ ವಯಸ್ಸಿನ ಕುಮಾರಿ ಶೋಭಾ ಕರಂದ್ಲಾಜೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವಾಗ, ನಿಮಗೆ ನಿಮ್ಮ ತಾಯಿಯ ನೆನಪಾಗಲಿಲ್ಲವೇ ಎಂದೂ ಸಹ ಪ್ರಶ್ನೆ ಮಾಡಿದ್ದಾರೆ.
ಅವಾಚ್ಯ ಪದ ಬಳಕೆಯ ವಿರುದ್ಧ ಕಾನೂನು ಹೋರಾಟ ಮಾಡಲು ಯುವ ಮೋರ್ಚಾ ಕೊಪ್ಪ ತಾಲೂಕು ಸದಾ ಸಿದ್ಧವಿದೆ ಪೊಲೀಸರು ಈ ಕುರಿತು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡುವುದಾಗಿ ಯುವಮೋರ್ಚಾ ಪದಾಧಿಕಾರಿಗಳು ತಮ್ಮ ನಿಲುವನ್ನು ತಿಳಿಸಿದ್ದಾರೆ.



0 Comments