ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ,ಬಣಕಲ್ ಹಾಗೂ ಕೊಟ್ಟಿಗೆಹಾರ ಭಾಗದ ಸಾರ್ವಜನಿಕರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಉಂಟಾಗುತ್ತಿದೆ, ಕೂಡಲೇ ಸಮರ್ಪಕ ರೀತಿಯಲ್ಲಿ ಸರ್ಕಾರಿ ಬಸ್ಸುಗಳನ್ನು ಈ ಭಾಗಕ್ಕೆ ಬಿಡಬೇಕೆಂದು ಜಾಗೃತ ಮತದಾರ ವೇದಿಕೆ ಆಗ್ರಹಿಸಿದೆ.

ಪ್ರತಿನಿತ್ಯ ಸಂಜೆ ಹೊತ್ತಿನಲ್ಲಿ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಸಾಗಲು ಬಸ್ ಸಂಚಾರ ಇಲ್ಲದೆ ಸಾರ್ವಜನಿಕರು, ಕೂಲಿಕಾರ್ಮಿಕರು ಪರದಾಡಬೇಕಾಗಿದೆ, ಬಸ್ ಸಿಗಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ತಲೆದೋರಿದೆ ಎಂದು ಯುವ ಜಾಗೃತ ಮತದಾರರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರಕುಮಾರ್ ಫಲ್ಗುಣಿ ತಿಳಿಸಿದರು.

ಸಂಜೆಯಾದರೆ ಮೂಡಿಗೆರೆಯಿಂದ ಕೊಟ್ಟಿಗೆಹಾರ ಕಡೆಗೆ ಸಾಗಲು ಯಾವುದೇ ಬಸ್ ವ್ಯವಸ್ಥೆಗಳಿಲ್ಲ, ಸಂಜೆಯ ಸಮಯದಲ್ಲಿ ಜನರು ಮನೆಗೆ ಹಿಂದಿರುಗಲು   ಪರದಾಡುವಂತಾಗಿದೆ, ದುಪ್ಪಟ್ಟು ಹಣ ನೀಡಿ ಮನೆಗೆ ಸೇರಬೇಕಾದ ಪರಿಸ್ಥಿತಿ ಇದೆ, ಈ ಕಾರಣದಿಂದಾಗಿ ಸಂಜೆ 6 ರಿಂದ 9 ಗಂಟೆ ವರೆಗೆ ಮೂಡಿಗೆರೆಯಿಂದ ಕೊಟ್ಟಿಗೆಹಾರ ಮಾರ್ಗಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸರಕಾರಿ ಬಸ್ ಬಿಡಲೇಬೇಕೆಂದು ಒತ್ತಾಯಿಸಿ ತಮ್ಮ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.