ಚಿಕ್ಕಮಗಳೂರು : ಜಿಲ್ಲೆಯ ಆಟೋ ಚಾಲಕರ ಪರ್ಮಿಟ್ ವಿಚಾರದ ಕುರಿತಂತೆ ಗ್ರಾಮ ಪಂಚಾಯತ್ ಮತ್ತು ಹೋಬಳಿ ಮಟ್ಟಕ್ಕೆ ಮಾತ್ರ ಸೀಮಿತವಾಗಿ ಆಟೋ ಚಾಲಕರಿಗೆ ಪರ್ಮಿಟ್ ನೀಡಿರುವುದು ಸರಿಯಲ್ಲ ಇದೊಂದು ಅವೈಜ್ಞಾನಿಕ ನಡೆ ಇದನ್ನು ಕೂಡಲೇ ಪರಿಶೀಲಿಸಿ ಸೂಕ್ತ ಕಾನೂನನ್ನು ರೂಪಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಗೆ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷ ಸುಧಾಕರ್. ಎಸ್ ಶೆಟ್ಟಿ ಅವರು ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶ, ಬೇರೆ ಊರುಗಳ ಹಾಗೆ ಇದು ಬಯಲು ಪ್ರದೇಶವಲ್ಲ, ಇಂತಹ ಪ್ರದೇಶದಲ್ಲಿ ಓಡಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿ ತಲೆದೋರಿದೆ ಅಂತಹುದರಲ್ಲಿ ಆಟೋ ಚಾಲಕರಿಗೆ ತಾಲೂಕು ಹಂತದಲ್ಲಿ ಆಟೋಗಳ ರಹದಾರಿಯನ್ನು ರದ್ದು ಗೊಳಿಸಿದರೆ ಆಟೋವನ್ನೆ ಜೀವನಕ್ಕಾಗಿ ನಂಬಿರುವ ಆಟೋ ಚಾಲಕರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಕಾನೂನು ಮಲೆನಾಡಿನ ಭಾಗಕ್ಕೆ ಸರಿಯಲ್ಲ, ಇದನ್ನು ಈ ಕೂಡಲೇ ಮರು ಪರಿಶೀಲಿಸಿ ಸೂಕ್ತ ಕಾನೂನನ್ನು ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅತೀ ಕಡಿಮೆ ಜನಸಂಖ್ಯೆ ಇರುವ ಈ ಭಾಗದಲ್ಲಿ ಈ ರೀತಿಯ ಕಾನೂನು ಕೆಲವರ ಜೀವನವನ್ನೇ ನಾಶ ಮಾಡುತ್ತದೆ. ಸರ್ಕಾರದ ನಿಯಮಗಳು ಪ್ರತಿಯೊಬ್ಬರಿಗೂ ಹಿತ ಉಂಟು ಮಾಡುವಂತೆ ಇರಬೇಕೆ ಹೊರತು ಈ ರೀತಿಯಾಗಿ ಅವೈಜ್ಞಾನಿಕತೆ ಹೊಂದಿರಬಾರದು ಎಂದು ಹೇಳಿದ್ದಾರೆ.



0 Comments