ಚಿಕ್ಕಮಗಳೂರು : ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರಿಗೆ ಅನ್ಯಾಯ ಮಾಡಿದ್ದಾರೆ, ಈ ಕೂಡಲೇ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಬೇಕು, ನಾಳೆ ನಡೆಯಲಿರುವ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶೃಂಗೇರಿ ತಾಲೂಕಿನ ಜೆಡಿಎಸ್ ಅಧ್ಯಕ್ಷರಾದ ಕಳಸಪ್ಪ ಗೌಡ ಅವರು ಹೇಳಿದ್ದಾರೆ.
ಯುನೆಸ್ಕೋ ದೇಶಗಳ ನಾಯಕತ್ವ ವಹಿಸುವ ಮೊದಲು ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದ ಬೆನ್ನೆಲುಬಾದ ರೈತರ ಸಮಸ್ಯೆಯನ್ನು ಬಹೆಗರಿಸಲಿ. ನಾವು ಬೆಳೆದ ಭತ್ತ, ತರಕಾರಿಗಳಾಗಲಿ, ಇನ್ನಿತರ ದವಸ ಧಾನ್ಯಗಳಾಗಲಿ ಯಾವುದಕ್ಕೂ ಬೆಂಬಲ ಬೆಲೆ ಸಿಗದೇ ಭಾರತದ ರೈತರು ಈಗಾಗಲೇ ಹೈರಾಣಾಗಿದ್ದಾರೆ. ದೇಶದ ರೈತರ ಸಮಸ್ಯೆಯು ಮಿತಿ ಮೀರಿದೆ, ಬಹಳಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಪ್ರಸ್ತುತ ದೇಶದಲ್ಲಿ ನಿರ್ಮಾಣವಾಗಿದೆ. ಅದರಲ್ಲೂ ಮಲೆನಾಡಿನ ಪ್ರಮುಖ ಕೃಷಿಗಳಾದ ಭತ್ತ, ಶುಂಠಿ, ಅಡಿಕೆ ಈ ಬೆಳೆಗಳ ಮೇಲಿನ ದರ ನಿಗದಿಯು ಸರಿಯಾಗಿ ಆಗದೇ ಸಂಪೂರ್ಣ ಮಲೆನಾಡಿನ ರೈತಾಪಿ ವರ್ಗ ಕಂಗೆಟ್ಟಿದೆ ಎಂದರು.
ಮಲೆನಾಡಿನ ಭಾಗದ ಅಡಿಕೆ ತೋಟಗಳಲ್ಲಿ ಹಳದಿ ಎಲೆ ರೋಗವು ತಾಂಡವ ಆಡುತ್ತಿದೆ. ಅಡಿಕೆ ತೋಟಗಳು ಸರ್ವ ನಾಶವಾಗುವ ಅಂಚಿನಲ್ಲಿದೆ. ಆದರೆ ಸರ್ಕಾರವು 50 ಕೋಟಿ ರೂಪಾಯಿ ವೆಚ್ಚವನ್ನು ಖರ್ಚು ಮಾಡಿ ಒಂದು ಪ್ರಯೋಗಾಲಯ ವನ್ನು ತೆರೆಯುವ ಕುರಿತಾಗಿ ಗಮನ ಹರಿಸುತ್ತಿಲ್ಲ, ಈ ಭಾಗದಲ್ಲಿ ಬೆಳೆಯುವ ಬೇರೆ ಬೆಳೆಗಳಾದ ಬಾಳೆ, ಭತ್ತ ಮುಂತಾದ ಕೃಷಿಗಳಿಗೆ ಕೋಲ್ಡ್ ಸ್ಟೋರೇಜ್ ನ ವ್ಯವಸ್ಥೆ ಕೂಡ ಕಲ್ಪಿಸಿಲ್ಲ ಇದು ಶೋಚನೀಯ ಸ್ಥಿತಿಯಾಗಿದೆ ಎಂದರು.
ರೈತರು ಬೆಳೆದ ಭತ್ತಕ್ಕೆ ಕನಿಷ್ಟ ಬೆಲೆಯಾಗಲಿ, ಅಥವಾ ಬೆಂಬಲ ಬೆಲೆಯಾಗಲಿ ಯಾವುದು ಸಹ ನಿಗದಿಯಾಗಿಲ್ಲ. ರೈತರು ಬೆಳೆದ ಭತ್ತಕ್ಕೆ ಕನಿಷ್ಟವೆಂದರು 2200 ರೂಪಾಯಿಗಳ ಬೆಳೆಯಾದರೆ ಸರ್ಕಾರವೇ ಸಂಪೂರ್ಣವಾದ ಗೋದಾಮುಗಳನ್ನು ನಿರ್ಮಿಸಿ ಈ ಕುರಿತು ವ್ಯವಹರಿಸಬೇಕು ಎಂದು ಹೇಳಿದ್ದಾರೆ.
ಕೊಪ್ಪ, ಎನ್.ಆರ್. ಪುರ, ಶೃಂಗೇರಿ ಭಾಗದಲ್ಲಿ ಯಾವುದೇ ಕೋಲ್ಡ್ ಸ್ಟೋರೇಜ್ ಇಲ್ಲದೆ ತರಕಾರಿ ಅಥವಾ ದವಸ ಧಾನ್ಯಗಳನ್ನು ಬೆಳೆದರೆ ಬೆಲೆ ಸಿಗುವುದಿಲ್ಲ ಆದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸ ಗಳ ನ್ನು ಕೈಗೊಂಡು ಅಫ್ಘಾನಿಸ್ತಾನ್ ಮುಂತಾದ ದೇಶಗಳ ಸಮಸ್ಯೆಯನ್ನು ಬಗೆ ಹರಿಸುವ ಮೊದಲು ದೆಹಲಿಯಲ್ಲಿ ಹತ್ತು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ, ಅವರಿಗಾಗಿರುವ ಅನ್ಯಾಯಕ್ಕೆ ಮೊದಲು ಪರಿಹಾರ ದೊರಕಿಸಿ ನಂತರದಲ್ಲಿ ವಿದೇಶಗಳ ಸಮಸ್ಯೆಗೆ ಪರಿಹಾರ ದೊರಕಿಸಲಿ ಎಂದು ಶೃಂಗೇರಿ ತಾಲೂಕಿನ ಜಾತ್ಯಾತೀತ ಜನತಾದಳದ ಅಧ್ಯಕ್ಷರಾದ ಶ್ರೀ ಕಳಸಪ್ಪನವರು ಆಗ್ರಹಿಸಿದ್ದಾರೆ.
ಕೂಡಲೇ ರೈತರು ಬೆಳೆಯುತ್ತಿರುವ ಬೆಳೆಗೆ ಬೆಂಬಲ ಬೆಲೆ ನಿಗದಿ ಪಡಿಸಬೇಕೆಂದು ಆಗ್ರಹಿಸಿದ್ದಾರೆ.




0 Comments