ತೀರ್ಥಹಳ್ಳಿ : ಕಾಂಗ್ರೆಸ್ ಪಕ್ಷವನ್ನು ಸೇರಿದ ನಂತರದ ಕ್ಷಣದಿಂದಲೇ, ಪಕ್ಷದಲ್ಲಿ ಗುಂಪುಗಾರಿಕೆ ಆರಂಭಿಸಿದ ಮಂಜುನಾಥ್ ಗೌಡ ಅವರನ್ನು ಪಕ್ಷದಿಂದ ಹೊರಹಾಕುವುದೇ ಉತ್ತಮವಾಗಿದೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರನ್ನು ಕಡೆಗಣಿಸಿ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಘಟಕವನ್ನು ಕಡೆಗಣಿಸಿ ಪಕ್ಷದ ಮುಖಂಡರ ಫೋಟೋಗಳನ್ನು ಬಳಸಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಮಂಜಸವಲ್ಲ, ಪಾದಯಾತ್ರೆ ಹಾಗೂ ಇತರ ಚಳುವಳಿಗಳು ಎಲ್ಲರನ್ನೂ ಒಗ್ಗೂಡಿಸಿ ನಡೆಯಬೇಕೆ ಹೊರತು ಗುಂಪುಗಾರಿಕೆಯಿಂದಲ್ಲ ಹಾಗೂ ಈ ರೀತಿಯ ವರ್ತನೆಗಳು ಪಕ್ಷ ವಿರೋಧಿಯಾಗಿದೆ ಎಂದು ಕಿಮ್ಮನೆ ರತ್ನಾಕರ್ ದೂರಿದ್ದಾರೆ.
ಹಣ-ಹೆಂಡ ಇತ್ಯಾದಿ ಆಮಿಷಗಳನ್ನು ಒಡ್ಡಿ ತೀರ್ಥಹಳ್ಳಿ ಕ್ಷೇತ್ರದ ಮತದಾರರನ್ನು ಸೆಳೆಯಬಹುದು ಎಂದು ಆಲೋಚಿಸಿದ್ದರೆ ಇಂತಹ ಆಲೋಚನೆಗಳಿಗೆ ಕ್ಷೇತ್ರದ ಜನ ಎಂದಿಗೂ ಪ್ರಾಶಸ್ತ್ಯ ನೀಡುವುದಿಲ್ಲ ಎಂದು ಹೇಳಿದರು.
ಪಕ್ಷದಲ್ಲಿದ್ದುಕೊಂಡೇ ಪಕ್ಷದ ಘಟಕಗಳನ್ನು ಒಡೆಯುವುದು ಪಕ್ಷವಿರೋಧಿ ಚಟುವಟಿಕೆ ಯಾಗಿದೆ ಎಂದು ಕಿಮ್ಮನೆ ರತ್ನಾಕರ್ ಗುಡುಗಿದ್ದಾರೆ.
ಸತತ 35 ವರ್ಷಗಳಿಂದ ಈ ಭಾಗದ ಜನರ ಬಾಳಿಗೆ ನ್ಯಾಯ ಒದಗಿಸಲು ಹಲವಾರು ಹೋರಾಟಗಳಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಹಾಗೂ ನಾನು ಹೋರಾಟ ಮಾಡಿದ್ದೇವೆ. ಇದೆಲ್ಲವೂ ಜನರ ಮನಸ್ಸಿನಲ್ಲಿ ಸದಾ ಹಚ್ಚಹಸಿರಾಗಿ ಇರುತ್ತದೆ, ಇದನ್ನೆಲ್ಲ ಜನರ ಮನಸ್ಸಿನಿಂದ ತೆಗೆಯಲು ಎಂದಿಗೂ ಆಗುವುದಿಲ್ಲ ಎಂದರು.
ಈಗ ಮುನ್ನೆಲೆಯಲ್ಲಿ ನಿಂತು ಹೋರಾಟ ಮಾಡುತ್ತಿರುವುದರ ಉದ್ದೇಶ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಎಂದು ಸಾಮಾನ್ಯವಾಗಿ ಈ ಭಾಗದ ಜನತೆಗೆ ಗೊತ್ತಿದೆ, ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಸ್ಪರ್ಧಿಸಬೇಕೆಂದು ಆಕಾಂಕ್ಷೆ ಇಟ್ಟುಕೊಂಡಿರುವ ಪಕ್ಷದ ಅಪೇಕ್ಷಿತ ರಿಗೆ ಮಂಜುನಾಥ್ ಗೌಡ ಅವರು ಬೆದರಿಸುತ್ತಿರುವ ಕುರಿತು ನನ್ನಲ್ಲಿ ಮಾಹಿತಿ ಇದೆ, ಇಂತಹುದನ್ನು ಸಹಿಸುವ ಪ್ರಮೇಯವೇ ಇಲ್ಲ ಎಂದು ಕಿಮ್ಮನೆ ರತ್ನಾಕರ್ ನುಡಿದರು.



0 Comments