ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ಕೆಲದಿನಗಳ ಹಿಂದೆ ಬಹಳ ಉಪಟಳ ನೀಡಿದ್ದ ಕೋತಿಯೊಂದನ್ನು  ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯಕ್ಕೆ ಬಿಟ್ಟಿದ್ದರು. 

ಆದರೆ ಅರಣ್ಯಕ್ಕೆ ಬಿಟ್ಟಿದ್ದ ಪುಂಡ ವಾನರವು ಮತ್ತೆ  ಕೊಟ್ಟಿಗೆಹಾರದಲ್ಲಿ ಕಾಣಿಸಿಕೊಂಡಿದೆ.  ಸಾರ್ವಜನಿಕ ವಲಯದಲ್ಲಿ ಈ ಘಟನೆಯು ಬಹಳ ಚರ್ಚೆಯಲ್ಲಿದೆ.

ಕೆಲದಿನಗಳ ಹಿಂದೆ ಕೊಟ್ಟಿಗೆಹಾರದಲ್ಲಿ ಇದೇ ವಾನರವು ಇಬ್ಬರಿಗೆ ಕಚ್ಚಿ ಗಾಯ ಮಾಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು, ಸತತ ಕಾರ್ಯಾಚರಣೆ ನಡೆಸಿ ಅರವಳಿಕೆ ನೀಡಿ ಕೋತಿಯನ್ನು ಹಿಡಿದು 20 ಕಿ.ಮೀ ದೂರದ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದರು.  

ಆದರೆ ಅದೇ ವಾನರವು ಮಂಗಳವಾರ ರಾತ್ರಿ ಚಾರ್ಮಾಡಿ ಘಾಟ್ ಅರಣ್ಯದ ಮಾರ್ಗವಾಗಿ,  ಲಾರಿಯೊಂದರ ಮುಖಾಂತರ ಕೊಟ್ಟಿಗೆಹಾರಕ್ಕೆ ಬಂದು ಮತ್ತೆ ಕೊಟ್ಟಿಗೆಹಾರದಲ್ಲಿ ಕಾಣಿಸಿಕೊಂಡಿತ್ತು, ಇದು  ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತ್ತು.

ಇಂದು (ಬುಧವಾರ) ಸಂಜೆಯವರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದರು.3 ಕಿಲೋಮೀಟರ್ ದೂರದ ವ್ಯಾಪ್ತಿಯ ವರೆಗೆ  ಕೋತಿಯು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು  ಗೋಳಾಡಿಸಿ, ಆಟವಾಡಿಸಿ, ನಂತರ ನೀಡಿದ ಅರವಳಿಕೆಗೆ ಶರಣಾಯಿತು. 

ಕೋತಿಯನ್ನು ಸೆರೆಹಿಡಿದು ಹೊರಜಿಲ್ಲೆಯ ಅರಣ್ಯಕ್ಕೆ ಬಿಡಲೆಂದು ಇಲಾಖೆಯ ಸಿಬ್ಬಂದಿಗಳು  ಕೊಂಡೊಯ್ದರು. ಈಸಂದರ್ಭದಲ್ಲಿ ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್,   ಭದ್ರಾ ವನ್ಯಜೀವಿ ವಲಯ ಇಲಾಖೆಯ ಪಶುವೈದ್ಯಾಧಿಕಾರಿ ಡಾಕ್ಟರ್ ಯಶಸ್, ಉಪ ವಲಯ ಅರಣ್ಯಾಧಿಕಾರಿಗಳಾದ ಬಸವರಾಜ್, ಶಿವಕುಮಾರ್, ಅರಣ್ಯ ರಕ್ಷಕರಾದ ಪರಮೇಶ್, ಮೋಸಿನ್, ಅರಣ್ಯ ವೀಕ್ಷಕ ವಿಜಯಕುಮಾರ್, ಚಾಲಕ ಸುಮಂತ್, ಸ್ಥಳೀಯರಾದ ದಿನೇಶ್ ತರುವೆ ಮುಂತಾದವರು ಇದ್ದರು.

ವಿಶೇಷ ವರದಿ - ತನು ಕೊಟ್ಟಿಗೆಹಾರ.