ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತಾಲೂಕಿನ  ಬಣಕಲ್ ಹೋಬಳಿಯ ಬಿ. ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹುಲಿ ದಾಳಿ ಈ ಹಿಂದಿನಿಂದ ಹಲವಾರು ಬಾರಿ ನಡೆದಿದೆ.

25ಕ್ಕೂ ಅಧಿಕ ದನಗಳನ್ನು ಕೊಂದು ಹಾಕಿದ ಹುಲಿಯನ್ನು ಸ್ಥಳಾಂತರಿಸಲು ಬಿ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ, ಭಾರತಿ ಬೈಲ್  ಸಮುದಾಯ ಭವನದಲ್ಲಿ ಹಿರಿಯ ಅರಣ್ಯಾಧಿಕಾರಿಗಳನ್ನು ಕರೆಸಿ ಸಭೆ ನಡೆಸಿ ಇಂದು ಮನವಿ ಸಲ್ಲಿಸಿದರು.

ಮೂಡಿಗೆರೆ ಭಾಗದ ಬಿ.ಹೊಸಳ್ಳಿ, ಭಾರತಿಬೈಲ್,ಹೊಕ್ಕಳ್ಳಿ ,ಅಬ್ಬಿಗುಂಡಿ, ಹಳೆಹಳ್ಳಿ ,ಕನ್ನಗೇರೆ, ಬೆಳಗೋಡು ಗ್ರಾಮದಲ್ಲಿ ಸತತವಾಗಿ ಮೂರು ವರ್ಷಗಳಿಂದ ನಿರಂತರವಾಗಿ ಹುಲಿಯ ದಾಳಿ ಜಾನುವಾರುಗಳ ಮೇಲೆ  ನಡೆಯುತ್ತಲೇ ಇದೆ ಈವರೆಗೆ ಒಟ್ಟು 25 ದನಗಳನ್ನು ಹುಲಿ ಕೊಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.



ಈ ಬಗ್ಗೆ ಅನೇಕ ಬಾರಿ ದೂರು ನೀಡಿದ್ದರೂ ಅರಣ್ಯಾಧಿಕಾರಿಗಳು  ಹುಲಿ ಸ್ಥಳಾಂತರಿಸುವ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ಈ ಭಾಗದ ಕೂಲಿಕಾರ್ಮಿಕರು ಕೆಲಸಕ್ಕೆ ಸಾಗಲು, ಶಾಲಾ ಮಕ್ಕಳು, ಗ್ರಾಮಸ್ಥರು ಗ್ರಾಮದಲ್ಲಿ ನಿರ್ಭಯವಾಗಿ ಓಡಾಡಲು ಭಯಪಡುತ್ತಿದ್ದಾರೆ. ದನಗಳನ್ನು ಕೊಂದುತಿಂದ ಹುಲಿ ಜನರ ಮೇಲೆ ದಾಳಿ ಮಾಡುವ ಎಲ್ಲಾ ಸಾಧ್ಯತೆಗಳಿದ್ದು  ಪ್ರಾಣ ಹಾನಿ ಸಂಭವಿಸುವ ಮೊದಲು ಹುಲಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯಕ್, ಹುಲಿ ಚಲನವಲನಗಳ ಬಗ್ಗೆ ಗಮನಹರಿಸಿ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಆದೇಶದಂತೆ ಹುಲಿ ಸ್ಥಳಾಂತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ಕ್ಯಾಮರಾ ಅಳವಡಿಸಿ  ಹುಲಿಯ ಬಗ್ಗೆ ಕಾರ್ಯಾಚರಣೆ ನಡೆಸಲಾಗುವುದು. ನಂತರ ಹುಲಿ ಸ್ಥಳಾಂತರಕ್ಕೆ ಪ್ರಯತ್ನಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿ ಉಮೇಶ್, ಬಿ. ಹೊಸಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ, ಉಪಾಧ್ಯಕ್ಷ ಸರಸ್ವತಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು.