ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಆರ್.ಎಸ್.ಎಸ್ ನ್ನು ತಾಲಿಬಾನ್ ಗೆ ಹೋಲಿಸಿದ ಸಿದ್ದರಾಮಯ್ಯರ ಹೇಳಿಕೆ ಅತ್ಯಂತ ಖಂಡನೀಯ, ಆರೆಸ್ಸೆಸ್ ನ್ನು ತಾಲಿಬಾನ್ ಗೆ ಹೋಲಿಸುವ ಸಿದ್ದರಾಮಯ್ಯ ಟಿಪ್ಪು ವಂಶಸ್ಥರಿರಬೇಕು ಎಂದು ವಿರಾಜಪೇಟೆ ಶಾಸಕರಾದ ಕೆ.ಜಿ ಬೋಪಯ್ಯ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆರ್.ಎಸ್.ಎಸ್ ನ ದೇಶಭಕ್ತಿ ಸಂಸ್ಕೃತಿ ತಿಳಿಯದೇ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಯಾರದೇ ವಿರುದ್ದ ಮಾತನಾಡುವಾಗ ಒಬ್ಬ ಮಾಜಿ ಮುಖ್ಯಮಂತ್ರಿಗಳಿಗೆ ಗಂಭೀರತೆ ಇರಬೇಕು. ಇಂಥ ಬಾಲಿಶ  ಹೇಳಿಕೆ  ನೀಡಿರುವುದು ಅತ್ಯಂತ ಖಂಡನೀಯ. ಈ ರೀತಿಯ ಹೇಳಿಕೆಯನ್ನು ಮಾಜಿ ಸಿ.ಎಂ ಸಿದ್ದರಾಮಯ್ಯರಿಂದ ಯಾರು ಸಹ ನಿರೀಕ್ಷೆ ಮಾಡಿರಲಿಲ್ಲ. ಈ ಮೂಲಕ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ ಎಂದರು. ಆರ್ ಎಸ್ ಎಸ್ ಹಾಗೂ ಬಿಜಿಪಿಗರು ತಾಲಿಬಾನಿಗಳು  ಎಂಬ ಹೇಳಿಕೆಗೆ ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಬೇಕು.

ಬಿಜೆಪಿ ಒಂದು ರಾಷ್ಟ್ರೀಯ ವಿಚಾರಧಾರೆ ಹೊಂದಿರುವ, ರಾಷ್ಟ್ರೀಯ ಪಕ್ಷ ಇದರ ವಿರುದ್ದ ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಸಿದ್ದರಾಮಯ್ಯನವರು ಕ್ಷಮೆಯಾಚಿಸಬೇಕು ಎಂದರು. ತನ್ನ ಸ್ವಾರ್ಥವನ್ನು ಬಿಟ್ಟು ಸಮಾಜಕ್ಕಾಗಿ ಬದುಕನ್ನು ಮುಡಿಪಾಡಿಟ್ಟ ದೇಶ ಭಕ್ತರನ್ನ ಹೊಂದಿರುವ ಸಂಘಟನೆ ಆರ್.ಎಸ್.ಎಸ್.

ಇಂತಹ ಸಂಘಟನೆ ವಿರುದ್ದ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದು ಅತ್ಯಂತ ಖಂಡನೀಯ. ಮುಂದಿನ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಅವರ ಕನಸು ಎಂದೆಂದೂ ನನಸಾಗುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಸಿದ್ದರಾಮಯ್ಯ ಕನಸು ಕನಸಾಗಿಯೇ ಉಳಿಯುತ್ತದೆ.

ರಾಜಕೀಯಕ್ಕೋಸ್ಕರ ಹಿಂದೂ ಮುಸಲ್ಮಾನರ ವಿಚಾರವನ್ನು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಈ ಎಲ್ಲಾ ವಿಚಾರದಲ್ಲಿ  ರಾಜಕೀಯ ಮಾಡೋದು ಸಮಂಜಸವಲ್ಲ ಎಂದರು. ಕೊಡಗು ಸೇರಿದಂತೆ ರಾಜ್ಯದಲ್ಲಿ ಮತಾಂತರ ವ್ಯಾಪಕವಾಗಿ ಹೆಚ್ಚಾಗುತ್ತಿದೆ.

ಮುಂದಿನ ಅಧಿವೇಶನದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಯಾಗುವುದು ಖಂಡಿತಾ. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಮತಾಂತರ ನಿಲ್ಲುತ್ತದೆ, ಬಿಜೆಪಿ ಅಂತಹ ಕಾನೂನು ಜಾರಿಗೊಳಿಸಲಿದೆ. ರಾಜ್ಯದಲ್ಲಿ ಕುದುರೆ ರೇಸ್, ಹಣ ಕಟ್ಟಿ ಇಸ್ಪೀಟ್ ಆಡುವುದು, ಆನ್ ಲೈನ್ ಜೂಜು ಸೇರಿದಂತೆ ಎಲ್ಲಾ ರೀತಿಯ ಜೂಜಿಗೆ ಕಾನೂನು ಮೂಲಕ ಸರ್ಕಾರ ಕಡಿವಾಣ ಹಾಕಿದೆ. ಇಂತಹ ಜೂಜಿನಲ್ಲಿ ತೊಡಗಿಕೊಂಡರೆ ಜಾಮೀನು ರಹಿತವಾಗಿ ಜೈಲು ಪಾಲಾಗಬೇಕಾಗುತ್ತದೆ ಎಂದರು.


ಕೊಡಗಿನಲ್ಲಿ ದಸರಾ ಉತ್ಸವ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ನಡೆಯಬೇಕು. ಕೋವಿಡ್ ನಿಯಮ ಪಾಲನೆ ಮುಖ್ಯ,ಹೆಚ್ಚು ಜನಸಂದಣಿ ಸೇರುವುದು ಸೂಕ್ತವಲ್ಲ, ಪ್ರಧಾನಿಗಳಾದ ಮೋದಿಜಿ ಕೂಡ, ಮನ್ ಕೀ ಬಾತ್ ನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಹಬ್ಬಗಳಿದ್ದು, ಜನಸಂದಣಿಯಿಂದ ಮತ್ತೆ ಕೋವಿಡ್ ಹೆಚ್ಚಾಗುವ ಬಗ್ಗೆ ಎಚ್ಚರಿಸಿದ್ದಾರೆ.  ಪ್ರತಿಯೋರ್ವರೂ ಈ ಬಗ್ಗೆ ಗಮನ ಹರಿಸುವುದು ಸೂಕ್ತ. - ಕೆ.ಜಿ ಬೋಪಯ್ಯ, ಶಾಸಕರು ವಿರಾಜಪೇಟೆ.