ಚಿಕ್ಕಮಗಳೂರು : ಬೆಳಗಾವಿಯಲ್ಲಿ ನಡೆದ  ಅತ್ಯಾಚಾರ ಮಾಸುವ ಮುನ್ನವೇ ಇಡೀ ರಾಜ್ಯ ತಲೆ ತಗ್ಗಿಸುವಂತೆ ಕಾಫೀ ನಾಡಿನಲ್ಲೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಸಖರಾಯಪಟ್ಟಣದ ಠಾಣಾ ವ್ಯಾಪ್ತಿಗೆ ಒಳಪಡುವ, ಗ್ರಾಮವೊಂದರ  ಅಪ್ರಾಪ್ತ ಬಾಲಕಿಯ ಮೇಲೆ, ಎರಡು ತಿಂಗಳಿನಿಂದ ನಿರಂತರ  ಅತ್ಯಾಚಾರ ಎಸಗಲಾಗಿದೆ. ಈ ಕುರಿತು ಪೊಲೀಸರು ಇಬ್ಬರು ಆರೋಪಿಗಳ ಬಂಧನ ಮಾಡಿದ್ದಾರೆ.

ಯುವತಿಯು ಬಟ್ಟೆ ಬದಲಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಆಕೆಯನ್ನು ಬೆದರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಯುವತಿ ದೂರು ನೀಡಿದ್ದಾಳೆ. ದೂರಿನ ಅನ್ವಯ ನಾಲ್ವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅತ್ಯಾಚಾರ ಎಸಗಲು ತನ್ನ ಮನೆಯನ್ನು ಬಿಟ್ಟು ಕೊಟ್ಟಿದ್ದಾತನ ಮೇಲೂ ಸಹ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಎಸಗಿದ ಮುಖ್ಯ ಆರೋಪಿ ಅನಿಲ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಗಣಪತಿ ವಿಸರ್ಜನೆಯ ವೇಳೆ ಈ ವಿಡಿಯೋ ಕುರಿತಂತೆ ಯುವಕರು ತಮ್ಮಲ್ಲೇ ಚರ್ಚೆ ನಡೆಸಿದ್ದರು, ಈ ವಿಡಿಯೋವನ್ನು ನೋಡಿದ್ದ ಆತನ ಸ್ನೇಹಿತರು ಕೂಡ ಯುವತಿಯನ್ನು ಗೇಲಿ ಮಾಡಿದ್ದರು. ಈ ಸಂಬಂಧ ನಾಲ್ವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳುವ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

- ತನು ಕೊಟ್ಟಿಗೆಹಾರ ವರದಿಗಾರರು.